ಉಡುಪಿ: ಕೃಷ್ಣ ನಗರಿ ಉಡುಪಿ ಸೋಮವಾರ (ಆಗಸ್ಟ್ 26) ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಜ್ಜುಗೊಂಡಿದೆ. ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಟಮಠಗಳಲ್ಲಿ ತಯಾರಿ ಭರದಿಂದ ಸಾಗಿದ್ದು, ಹಬ್ಬದ ಕಳೆ ಬಂದಿದೆ. ಸೋಮವಾರ ವಿವಿಧ ಕಾರ್ಯಕ್ರಮಗಳು ಮತ್ತು ರಾತ್ರಿ ಅರ್ಘ್ಯ ಪ್ರಧಾನ ಇದ್ದರೆ, ಮಂಗಳವಾರ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಹಬ್ಬ ಪರಾಕಾಷ್ಠೆ ತಲುಪಲಿದೆ. ಈ ಪ್ರಯುಕ್ತ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಿತರಿಸಲು ಸಾವಿರಾರು ಚಕ್ಕುಲಿ-ಉಂಡೆಪ್ರಸಾದ ತಯಾರಿಸಲಾಗಿದೆ. ಉಂಡೆ ಚಕ್ಕುಲಿ ಪ್ರಸಾದವನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತದೆ. ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ ಚಕ್ಕುಲಿ ತಯಾರಿ ಈಗಾಗಲೇ ಮುಕ್ತಾಯಗೊಂಡಿದೆ.
ಶ್ರೀ ಕೃಷ್ಣನಿಗೆ ಈ ಬಾರಿ 108 ಬಗೆಯ ಉಂಡೆ, ಚಕ್ಕುಲಿ : ಈ ಬಾರಿ ಪರ್ಯಾಯ ಪುತ್ತಿಗೆ ಶ್ರೀಗಳು ಲಡ್ಡು ಪ್ರಿಯ ಕೃಷ್ಣನಿಗಾಗಿ 108 ಬಗೆಯ ಲಡ್ಡುಗಳನ್ನು ತಯಾರಿಸಿರುವುದು ವಿಶೇಷ. ಎಲ್ಲಾ ಬಗೆಯ ಹಣ್ಣು, ತರಕಾರಿ, ಡ್ರೈ ಫ್ರುಟ್ ಮತ್ತು ಧಾನ್ಯಗಳಿಂದ ಬಗೆಬಗೆಯ ಲಡ್ಡುಗಳು ಕೃಷ್ಣನಿಗಾಗಿ ತಯಾರಾಗಿವೆ.
ಹೂವಿನ ವ್ಯಾಪಾರ, ಮೂಡೆ, ಪೇಟ್ಲ, ವ್ಯಾಪಾರ ಕೂಡ ಜೋರು : ನೆರೆ ಜಿಲ್ಲೆಗಳಿಂದ ಬಂದಿರುವ ಹೂವಿನ ವ್ಯಾಪಾರಿಗಳು ಕೃಷ್ಣ ಮಠದ ರಥಬೀದಿಯಲ್ಲಿ ವ್ಯಾಪಾರ ಶುರು ಮಾಡಿದ್ದಾರೆ. ಕೃಷ್ಣಮಠ ಸಂಪರ್ಕಿಸುವ ರಸ್ತೆಗಳಲ್ಲಿ ಹೂವಿನ ವ್ಯಾಪಾರ ಕೂಡ ಹೆಚ್ಚಾಗಿದೆ. ಸ್ಥಳದಲ್ಲಿಯೇ ಮೂಡೆಯನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿರುವ ದೃಶ್ಯಗಳು ಸಹ ಕಂಡು ಬಂತು. ಹಿಂದೆ ಶ್ರೀ ಕೃಷ್ಣನಿಗೆ ಪೂಜೆ ನಡೆಯುವಾಗ ಪೇಟ್ಲ ಹೊಡೆಯುವುದು ರೂಢಿಯಲ್ಲಿತ್ತು. ಅದರಂತೆ ಇಂದಿಗೂ ರೂಢಿಯಲ್ಲಿದ್ದು, ಪೇಟ್ಲ ಮಾರಾಟ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ.
ಸಿದ್ಧಗೊಂಡ ಶ್ರೀ ಕೃಷ್ಣನ ಮಣ್ಮಯ ಮೂರ್ತಿ : ವಿಟ್ಲಪಿಂಡಿಯ ದಿನದಂದು ಚಿನ್ನದ ರಥದಲ್ಲಿ ಕೃಷ್ಣನ ಮಣ್ಮಯ (ಮಣ್ಣಿನ) ಮೂರ್ತಿಯನ್ನು ಹೊರಗೆ ತರುವಂತಿಲ್ಲ. ಹಾಗಾಗಿ ವಿಟ್ಲಪಿಂಡಿಯ ದಿನ ನಡೆಯುವ ರಥೋತ್ಸವದಲ್ಲಿ ಮಣ್ಣಿನ ಕೃಷ್ಣನಿಗೆ ಪ್ರಾಣ ಪ್ರತಿಷ್ಠೆ ಮಾಡಿ ಚಿನ್ನದ ರಥದಲ್ಲಿಟ್ಟು ಪೂಜಿಸಿ, ರಥೋತ್ಸವದ ಬಳಿಕ ಮಧ್ವ ಸರೋವರದಲ್ಲಿ ನಿಮಜ್ಜನ ಮಾಡಲಾಗುತ್ತದೆ.
ಆಗಸ್ಟ್-26ರಂದು (ನಾಳೆ) ಡೋಲೋತ್ಸವ : ಆಗಸ್ಟ್ 26 ರಂದು (ಸೋಮವಾರ ಬೆಳಗ್ಗೆ) 9 ಗಂಟೆಗೆ ಡೋಲೋತ್ಸವ ಅಂಗವಾಗಿ ಶ್ರೀ ಕೃಷ್ಣನನ್ನು ಮಧ್ವಮಂಟಪದಲ್ಲಿ ತೊಟ್ಟಿಲಿನಲ್ಲಿಟ್ಟು ತೂಗಿ, ಉತ್ಸವ ಜರಗಲಿದ್ದು, ಭಕ್ತರಿಗೂ ಸೇವಾವಕಾಶವನ್ನು ಕಲ್ಪಿಸಲಾಗಿದೆ. 27ರಂದು ರಥಬೀದಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಶ್ರೀ ಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಉದ್ಘಾಟನೆಯು ಯತಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಆ ಬಳಿಕ ರಥಬೀದಿಯಲ್ಲಿ ವಿಟ್ಲಪಿಂಡಿಯ ಉತ್ಸವ ಮೊಸರು ಕುಡಿಕೆ, ಕೃಷ್ಣನ ಮಣ್ಮಯ ಮೂರ್ತಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ವಿಟ್ಲಪಿಂಡಿಯಂದು ಹುಲಿವೇಷ ಸೇರಿದಂತೆ ವಿವಿಧ ವೇಷಧಾರಿಗಳ ಕುಣಿತ ಪ್ರದರ್ಶನ ಹಾಗೂ ಸ್ಪರ್ಧೆಗಳು ನಡೆಯಲಿದ್ದು, ಹುಲಿಗಳ ಕುಣಿತಕ್ಕೆ ವೇದಿಕೆ ನಿರ್ಮಿಸುವ ಕೆಲಸವೂ ಭರದಿಂದ ಸಾಗಿದೆ. ವಿಟ್ಲಪಿಂಡಿಯಂದು ಮೊಸರು ಕುಡಿಕೆ ನೇತುಹಾಕುವ ಗುರ್ಜಿಗಳನ್ನು ರಥಬೀದಿಯಲ್ಲಿ ಹಲವು ಕಡೆಗಳಲ್ಲಿ ನೆಡಲಾಗಿದೆ. ಮೊಸರು, ಅರಿಶಿನ, ಕುಂಕುಮ ಮಿಶ್ರಿತ ದ್ರವ್ಯಗಳನ್ನು ಅಲಂಕೃತ ಮಣ್ಣಿನ ಕುಡಿಕೆಗಳಿಗೆ ತುಂಬಿಸಿ, ಈ ಗುರ್ಜಿಗಳಿಗೆ ನೇತುಹಾಕಲಾಗುತ್ತದೆ. ಗೊಲ್ಲ ವೇಷಧಾರಿಗಳು ಅದನ್ನು ಒಡೆಯುತ್ತಾರೆ.
ಹುಲಿ ಕೊರಳಿಗೆ ನೋಟಿನ ಮಾಲೆ : ಹುಲಿ ಸಹಿತ ನಾನಾ ವೇಷಗಳಿಗೆ ನೀಡಲು ನೋಟಿನ ಮಾಲೆ ತಯಾರಿ ಅಂತಿಮ ಹಂತದಲ್ಲಿದ್ದು, ತಂಡಕ್ಕೆ ಕನಿಷ್ಠ 25 ಸಾವಿರ ರೂ. ಗಳಂತೆ ಒಟ್ಟು 5 ಲಕ್ಷ ರೂ. ಪ್ರೋತ್ಸಾಹ ಧನವಾಗಿ ನೀಡಲು ಉದ್ದೇಶಿಸಲಾಗಿದೆ. 2023 ರಲ್ಲಿ ಒಂದು ಹುಲಿಗೆ 300 ರೂ. ನೋಟಿನ ಮಾಲೆ ಹಾಕಿದರೆ, ಈ ಬಾರಿ 500 ರೂಪಾಯಿ ತಲುಪಿದೆ. 20, 500, 100, 200 ರೂಪಾಯಿಯ ನೋಟುಗಳನ್ನು ಸಹ ಬಳಸಲಾಗಿದೆ.
ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀ ಪಾದರ ಸಂದೇಶ: 'ಭಗವಂತನು ಜಗತ್ತಿನ ಉದ್ದಾರಕ್ಕೋಸ್ಕರ ಅವತಾರ ಮಾಡಿದ್ದಾರೆ. ನಾವೆಲ್ಲರೂ ಆತನಿಗೆ ವಿಶೇಷ ಪೂಜೆ ಮಾಡಿದರೆ, ನಮಗೆ ಉತ್ತಮ ಪುಣ್ಯ ಸಿಗುತ್ತದೆ. ನಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗೋಣ. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ. ಇಡೀ ಜಗತ್ತು ಕೂಡ ಉದ್ದಾರವಾಗಲಿ' ಎಂದು ಆಶೀರ್ವದಿಸಿದರು.
ಇದನ್ನೂ ಓದಿ : ಅದ್ಧೂರಿ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜು: ಇಸ್ಕಾನ್ ದೇವಾಲಯದಲ್ಲಿ ವಿಶೇಷ ಪೂಜೆ - shri krishna janmashtami