ದಾವಣಗೆರೆ: ದಿಂಗಾಲೇಶ್ವರ ಸ್ವಾಮೀಜಿ ಏನು ಹೇಳಿದ್ದಾರೋ ಅದೆಲ್ಲವೂ ನನಗೆ ಆಶೀರ್ವಾದ. ನಾನು ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ಹರಿಹರದ ಬೆಳ್ಳೂಡಿ ಕಾಗಿನೆಲೆ ಕನಕ ಪೀಠದಲ್ಲಿಂದು, ಧಾರವಾಡ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇ ಜೋಶಿ ಎಂದು ದಿಂಗಾಲೇಶ್ವರ ಶ್ರೀ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಇನ್ನು, ಕಾಂಗ್ರೆಸ್ ಪಕ್ಷಕ್ಕೆ ತನ್ನ ಚಿಹ್ನೆಯ ಮೇಲೆ ವಿಶ್ವಾಸವಿಲ್ಲ. ರಾಹುಲ್ ಗಾಂಧಿ ಸಲ್ಲಿಸಿದ ನಾಮಪತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲ, ಬರೀ ಮುಸ್ಲಿಂ ಲೀಗ್ ಚಿಹ್ನೆಗಳಿವೆ. ಇದು ತುಷ್ಟೀಕರಣ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ನೀವು ಏನು ಸಂದೇಶ ಕೊಡಲು ಹೊರಟಿದ್ದೀರಾ?. ಜಗತ್ತಿನ ಮುಂದೆ ಭಾರತವನ್ನು ಯಾವ ರೀತಿ ಬಿಂಬಿಸಲು ಹೊರಟಿದ್ದೀರಾ?. ಪಕ್ಷದ ಚಿಹ್ನೆ ಇಟ್ಟುಕೊಳ್ಳುವ ಧೈರ್ಯ ನಿಮಗಿಲ್ಲ, ಇದು ಅತ್ಯಂತ ದೌರ್ಭಾಗ್ಯ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂ ಲೀಗ್ ಪಾರ್ಟಿ ಸ್ವತಂತ್ರ್ಯಪೂರ್ವದಲ್ಲಿ ದೇಶ ವಿಭಜನೆ ಮಾಡಿತ್ತು. ಈಗಲೂ ವಿಭಜಿಸುವ ಪ್ರಯತ್ನ ಮಾಡುತ್ತಿದೆ. ಮುಸ್ಲಿಂ ಲೀಗ್ಗಿಂತ ಕೆಟ್ಟ ಮನಸ್ಥಿತಿ ಕಾಂಗ್ರೆಸ್ ಪಕ್ಷದ್ದು. ಆ ಕಾರಣದಿಂದಲೇ ಕಳೆದ 75 ವರ್ಷಗಳಲ್ಲಿ ಇಡೀ ದೇಶದಲ್ಲಿ ಅತೀ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಬೇಕಾದ ದುಸ್ಥಿತಿಗೆ ಬಂದಿದೆ ಎಂದು ಟೀಕಿಸಿದರು. ಇದಕ್ಕೂ ಮೊದಲು ಪ್ರಹ್ಲಾದ್ ಜೋಶಿ ಕಾಗಿನೆಲೆ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನನ್ನ ವಿರುದ್ಧ ಸ್ಪರ್ಧಿಸುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ-ಬಿ.ವೈ ರಾಘವೇಂದ್ರ: ಮತ್ತೊಂದೆಡೆ, ಕಾಗಿನೆಲೆ ಕನಕ ಪೀಠದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಮಾಡಿದ ಸರ್ವಾಂಗೀಣ ಅಭಿವೃದ್ಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯತೆ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆಯೇ ಹೊರತು ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಎಲ್ಲಾ ಚುನಾವಣೆಯನ್ನೂ ಸವಾಲಾಗಿಯೇ ತೆಗೆದುಕೊಳ್ಳುತ್ತೇನೆ. ಕಳೆದ ಐದು ವರ್ಷಗಳಿಂದ ಕಾರ್ಯಕರ್ತರ ಮತ್ತು ಮತದಾರರ ಮಧ್ಯೆ ಇದ್ದೇನೆ. ನನ್ನ ವಿರುದ್ಧ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲ್ಲ ಎಂದು ಪರೋಕ್ಷವಾಗಿ ಈಶ್ವರಪ್ಪಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲೇ ಬೇರೆ ಬೇರೆ ಕಾಂಗ್ರೆಸ್ಗಳಿವೆ, ಈಗ ಇರೋದು ನಕಲಿ ಕಾಂಗ್ರೆಸ್: ಜೋಶಿ ಟೀಕೆ - Fake Congress