ಹುಬ್ಬಳ್ಳಿ : ಹುಬ್ಬಳ್ಳಿ - ಧಾರವಾಡ ನಗರದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಶೀಟರ್ಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿದ್ದು, ರೌಡಿಶೀಟರ್ಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿ, ರೌಡಿಸಂ ವರ್ತನೆ ತೋರಿದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅದರ ಭಾಗವಾಗಿ ಇಂದು ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ಗುಳ್ಳಾರಿ ಅವರ ನೇತೃತ್ವದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡವು ಬೆಂಡಿಗೇರಿ ಠಾಣೆಯ ವ್ಯಾಪ್ತಿಯ ರೌಡಿಶೀಟರ್ಗಳಾದ ರೋಹಿತ ತಂದೆ ವಿನೋದ ಕಲಾಲ, ಇಸ್ಮಾಯಿಲ್ ತಂದೆ ಮೆಹಬೂಬಸಾಬ ಭಾರದ್ವಾಲೆ, ಫಜಲ್ ತಂದೆ ತಾಜುದ್ದೀನ್ ಪುಣೆವಾಲೆ, ದಾವಲಸಾಬ ತಂದೆ ತಾಜುದ್ದೀನ್ ಪುಣೆವಾಲೆ, ವಿನೋದ ತಂದೆ ಪರಶುರಾಮ ಗುಡಿಹಾಲ, ಸಾಹಿಲ್‍ಭಕ್ಷ ತಂದೆ ರಫಿಕ ಚಡ್ಡಾ, ಪ್ರದೀಪ ತಂದೆ ಪ್ರಕಾಶ ಕೂಗೋಡ, ಪುಟ್ಟರಾಜು ತಂದೆ ಪ್ರಕಾಶ ಕೂಗೋಡ ಇವರುಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ರೌಡಿಶೀಟರ್ಗಳಿಗೆ ಯಾವುದೇ ಕಾನೂನು ಬಾಹಿರ ಮತ್ತು ಗಾಂಜಾ ಮಾರಾಟ, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುವುದು, ಸಾರ್ವಜನಿಕರ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಅಪರಾಧಿಕ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ರೌಡಿಸಂ ಚಟುವಟಿಕೆಗಳಲ್ಲಿ ತೊಡಗಿದ್ದಲ್ಲಿ ಗಡಿಪಾರುಗಳಂತಹ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ರೌಡಿಶೀಟರ್ಗಳ ಮನೆ ಮೇಲೆ ನಡೆದ ದಾಳಿ ವೇಳೆ ಈ ಹಿಂದೆ ಬೆಂಡಿಗೇರಿ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಸೆಟ್ಲಮೆಂಟ್ ನಿವಾಸಿ ಅಭಿಷೇಕ ತಂದೆ ಕುಮಾರ ಭಜಂತ್ರಿ ಹಾಗೂ ಎನ್.ಡಿ.ಪಿ.ಎಸ್ ಕಾಯ್ದೆಯಲ್ಲಿ ಅರೆಸ್ಟ್ ವಾರಂಟ್ ಆಗಿದ್ದ ಮತ್ತು ಹಲ್ಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಕೆ. ಬಿ ನಗರದ ನಿವಾಸಿ ಅರುಣ@ಗುಂಡ್ಯಾ ತಂದೆ ಮಂಜುನಾಥ ಹಲಗಿ ಎಂಬ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆದು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಂಡಿಗೇರಿ ಪೊಲೀಸ್ ಠಾಣೆಯ ಪಿ. ಐ ಮತ್ತವರ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದು, ಅವಳಿನಗರದಲ್ಲಿ ಯಾವುದೇ ರೀತಿಯ ರೌಡಿಸಂ ಚಟುಚಟಿಕೆಗಳಿಗೆ ಆಸ್ಪದ ಇರುವುದಿಲ್ಲ. ಅಂತಹ ವರ್ತನೆ ತೋರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಂಜಲಿ ಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಪ್ರಕರಣದಿಂದಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ತನಿಖೆ ಚುರುಕುಗೊಂಡಿದೆ.
ಇದನ್ನೂ ಓದಿ : ಸಿಐಡಿ ಭೇಟಿಯಾದ ನಿರಂಜನ ಹಿರೇಮಠ; ನೇಹಾ ಕೊಲೆ ಪ್ರಕರಣ ದಿಕ್ಕು ತಪ್ಪಿಸದಂತೆ ಮನವಿ - NEHA MURDER CASE