ಹುಬ್ಬಳ್ಳಿ: ಅವಳಿ ನಗರದಲ್ಲಿ ಗಾಂಜಾ ಗುಂಗಲ್ಲಿ ತೇಲಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಗಾಂಜಾ ಮಾರಾಟಗಾರರು ಹಾಗೂ ವ್ಯಸನಿಗಳ ಮೇಲೆ ದಾಳಿ ನಡೆಸಿದ್ದು, ಹಲವಾರು ಗಾಂಜಾ ಮಾರಾಟಗಾರರು ಹಾಗೂ ವ್ಯಸನಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಹುಬ್ಬಳ್ಳಿಯ ರಂಭಾಪುರಿ ಸಭಾಂಗಣಕ್ಕೆ ಕರೆತಂದ ಪೊಲೀಸರು ಗಾಂಜಾ ವ್ಯಸನಿ ಹಾಗೂ ಪೆಡ್ಲರ್ಗಳಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಪಾಲಕರ ಸಮ್ಮುಖದಲ್ಲಿ ವ್ಯಸನಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಕಮಿಷನರ್ ಎನ್. ಶಶಿಕುಮಾರ್ ಎದುರು ಪಾಲಕರು ಕಣ್ಣೀರು ಹಾಕಿದರು. ಪೊಲೀಸರು ನಡೆಸಿದ 518 ಜನರ ತಪಾಸಣೆಯಲ್ಲಿ 147 ಜನ ಪಾಸಿಟಿವ್ ಬಂದಿದ್ದಾರೆ. 34 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಅವಳಿ ನಗರದಲ್ಲಿ ಡ್ರಗ್ ಅಭಿಯಾನ ನಿರಂತರವಾಗಿ ಮಾಡುತ್ತಾ ಇದ್ದೇವೆ. ಡ್ರಗ್ ಪೆಡ್ಲರ್, ವ್ಯಸನಿಗಳ ಮೇಲೆ ಮೂರು ಹಂತದಲ್ಲಿ ಕ್ರಮ ಕೈಗೊಂಡಿದ್ದೇವೆ. ಮೊದಲು ಶೇ.63.67 ರಷ್ಟು ಪಾಸಿಟಿವ್ ಬಂದಿತ್ತು. ಎರಡನೇ ಹಂತದಲ್ಲಿ ಶೇ.53 ರಷ್ಟು ಹಾಗೂ ಮೂರನೇ ಹಂತದಲ್ಲಿ ಶೇ 43ರಷ್ಟು ಇತ್ತು. ಇಂದು 518 ಜನರನ್ನು ತಪಾಸಣೆಗೆ ಒಳಪಡಿಸಿದ್ದೇವೆ. ಅದರಲ್ಲಿ 147 ಜನ ಪಾಸಿಟಿವ್ ಆಗಿದ್ದಾರೆ. 34 ಜನರ ಮೇಲೆ ಪ್ರಕರಣ ದಾಖಲು ಮಾಡಿದ್ದೇವೆ. ಇಂದಿನ ಹಂತದಲ್ಲಿ 29% ಪಾಸಿಟಿವ್ ಇದೆ. ಪೆಡ್ಲರ್ ಹಾಗೂ ಹಿಂದಿನ ಪಾಸಿಟಿವ್ ಬಂದವರು ನೀಡಿದ ಮಾಹಿತಿಯ ಮೇರೆಗೆ ವ್ಯಸನಿಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.