ಬೆಂಗಳೂರು: ಮಿಸ್ಡ್ ಕಾಲ್ ಕೊಟ್ಟು ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಗುಂಪೊಂದನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಜ್ಮಾ ಕೌಸರ್, ಮೊಹಮ್ಮದ್ ಅತೀಕ್ ಹಾಗೂ ಕರೀಂ ಉಲ್ಲಾ ಬಂಧಿತರು.
ಯುವಕರನ್ನು ಗುರಿಯಾಗಿಸಿಕೊಂಡು ಮಿಸ್ಡ್ ಕಾಲ್ ಕೊಟ್ಟು ಪರಿಚಯಿಸಿಕೊಳ್ಳುತ್ತಿದ್ದ ನಜ್ಮಾ, ನಂತರ ಅವರನ್ನು ಕರೆಸಿಕೊಂಡಯ ಹನಿಟ್ರ್ಯಾಪ್ ಮಾಡುತ್ತಿದ್ದಳು. ನಜ್ಮಾಳಿಗೆ ಮಹಮ್ಮದ್ ಅತೀಕ್ ಹಾಗೂ ಕರೀಂ ಉಲ್ಲಾ ಸಾಥ್ ನೀಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರಿನ ಯುವಕರನ್ನೇ ಗುರಿಯಾಗಿಸಿಕೊಂಡಿದ್ದ ನಜ್ಮಾ, ನಂತರ ಅವರೊಂದಿಗೆ ಕಷ್ಟ ಸುಖ ಮಾತನಾಡಿಕೊಂಡು ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಳು. ಅವರಿಂದ ಸಣ್ಣ ಮೊತ್ತದ ಹಣ ಪಡೆದು ಹಿಂತಿರುಗಿಸುವ ಮೂಲಕ ವಿಶ್ವಾಸ ಗಳಿಸುತ್ತಿದ್ದಳು. ಹಾಗೆಯೇ ಮುಂದುವರೆದು ದಿಢೀರನೆ ಒಮ್ಮೆ ಆ ಯುವಕರನ್ನು 'ಮನೆಯಲ್ಲಿ ಯಾರೂ ಇಲ್ಲ ಬಾ' ಎಂದು ಕರೆಯುತ್ತಿದ್ದಳು. ಆರೋಪಿಯ ಸಂಚು ಅರಿಯದೇ ಮನೆಗೆ ಹೋದವರನ್ನು ಲೈಂಗಿಕವಾಗಿ ಪ್ರಚೋದಿಸಿ ಬೆಡ್ ರೂಂಗೆ ಕರೆದೊಯ್ಯುತ್ತಿದ್ದಳು. ಬೆಡ್ರೂಂಗೆ ಹೋಗುತ್ತಿದ್ದಂತೆಯೇ ಎಂಟ್ರಿಯಾಗುತ್ತಿದ್ದ ಉಳಿದ ಆರೋಪಿಗಳು ಬೆದರಿಸಿ, ಅತ್ಯಾಚಾರದ ಆರೋಪ ಹೊರಿಸಿ ಕೇಳಿದಷ್ಟು ಹಣ ಕೊಡುವಂತೆ ಪೀಡಿಸುತ್ತಿದ್ದರು. ಹಣ ಕೊಡದಿದ್ದರೆ ಕೇಸ್ ಹಾಕಿಸುತ್ತೇವೆಂದು ಬೆದರಿಸಿ ಸುಲಿಗೆ ಮಾಡುತ್ತಿದ್ದರು.
ಇದೇ ಮಾದರಿಯಲ್ಲಿ ಕಳೆದ ವಾರವಷ್ಟೇ ಕೊರಿಯರ್ ಬಾಯ್‌ಗೆ ಆರೋಪಿಗಳು ಹನಿಟ್ರ್ಯಾಪ್ ಮಾಡಿದ್ದಾರೆ. ಸಂತ್ರಸ್ತ ಯುವಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Bengaluru crime: ವೃದ್ಧರನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್.. ಬೆಂಗಳೂರಲ್ಲಿ ಕಿಲಾಡಿ ಮಹಿಳೆಯರ ಬಂಧನ