ಮಂಡ್ಯ: "ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ಇಲ್ಲೂ ಕಾವೇರಿಗೆ ಆರತಿ ಮಾಡಲು ತೀರ್ಮಾನ ಮಾಡಲಾಗಿದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಆರ್ಎಸ್ ಜಲಾಶಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದು, ಭರ್ತಿಯಾಗಿರುವ ಕನ್ನಂಬಾಡಿ ಅಣೆಕಟ್ಟೆ ವೀಕ್ಷಿಸಿದರು. ಡಿಸಿಎಂಗೆ ಸಚಿವ ಚಲುವರಾಯಸ್ವಾಮಿ, ಹಾಗೂ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಉದಯ್, ದರ್ಶನ್ ಪುಟ್ಟಣ್ಣಯ್ಯ ಸಾಥ್ ನೀಡಿದರು.
ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, "ವರುಣನ ಕೃಪೆ, ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿ ತುಂಬಿ ಹರಿಯುತ್ತಿದ್ದಾಳೆ. ನಾವೆಲ್ಲ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ದಿನ ಬಂದಿದೆ. ಕಳೆದ ವರ್ಷ ನಾವು ಕಷ್ಟದಲ್ಲಿದ್ದೆವು. ಆದರೂ ರೈತರ ಹಿತ ಕಾಪಾಡುವ ಕೆಲಸ ಮಾಡಿದ್ದೇವೆ. ಹೋದ ವರ್ಷ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದವು. ಈ ವರ್ಷ ಎಲ್ಲೆಡೆ ಉತ್ತಮ ಮಳೆಯಾಗುತ್ತದೆ" ಎಂದು ಹೇಳಿದರು.
"ಕಾವೇರಿ ಪ್ರಾಧಿಕಾರದವರು 40 ಟಿಎಂಸಿ ನೀರು ಬಿಡುವಂತೆ ಆದೇಶ ಮಾಡಿದ್ರು. ಆದ್ರೂ ನಾವು ನೀರು ಬಿಡಲಿಲ್ಲ. ಕೆಲವರು ಬಿಟ್ಟಿದ್ದಾರೆ ಅಂತಾ ವಾದ ಮಾಡಿದ್ರು. ನಾವೆಲ್ಲರೂ ಚರ್ಚೆ ಮಾಡಿ ರೈತರ ಹಿತ ಕಾಯುವ ಕೆಲಸ ಮಾಡಿದೆವು. 40.43 ಟಿಎಂಸಿ ಸಾಮಾನ್ಯ ದಿನಗಳಲ್ಲಿ ಬಿಡಬೇಕಿತ್ತು. ಇಲ್ಲಿಯವರೆಗೂ 30 ಟಿಎಂಸಿ ನೀರು ಹೋಗಿದೆ. ಇನ್ನು 10 ಟಿಎಂಸಿ ನೀರು ಬಿಟ್ಟರೆ ನಮ್ಮ ಪಾಲಿನ ನೀರು ತಲುಪಲಿದೆ. 50 ಸಾವಿರ ಕ್ಯೂಸೆಕ್ ನೀರು ಇವಾಗ ಹೋಗುತ್ತಿದೆ." ಎಂದು ತಿಳಿಸಿದರು.
"31ರಿಂದ ಇಲ್ಲಿವರೆಗೆ ನಾವು ಆದೇಶ ಪಾಲನೆ ಮಾಡಿದ್ದೇವೆ. 1,657 ಕೆರೆಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಇವೆ. ಆ ಎಲ್ಲಾ ಕೆರೆಗಳನ್ನು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಸಮರ್ಪಕವಾಗಿ ಕೆರೆ ತುಂಬಿಸುವ ಕೆಲಸ ಮಾಡ್ತಾರೆ. 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದೇವೆ. ಅದಕ್ಕೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಇದೆ. ರೈತರಿಗೆ ಶೂನ್ಯ ಬಡ್ಡಿದರದ ಸಾಲ ವಿತರಣೆಗೂ ಸರ್ಕಾರ ಸಜ್ಜಾಗಿದೆ. ನಮ್ಮದು ರೈತರ ಪರ ಸರ್ಕಾರ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಗಂಗಾರತಿ ಮಾದರಿ ಕಾವೇರಿ ಆರತಿಗೆ ಯೋಜನೆ ಮಾಡಿದ್ದೇವೆ" ಎಂದರು.
"ಕಾವೇರಿ ಬೃಂದಾವನಕ್ಕೆ ಹೊಸ ರೂಪ ಕೊಡಲು ನಿರ್ಧಾರ. ಈ ಬಗ್ಗೆ ವರದಿ ಬಂದಿವೆ. ಶೀಘ್ರದಲ್ಲೇ ಕ್ಯಾಬಿನೆಟ್ ಮುಂದೆ ಹೋಗಲಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಕಾವೇರಿ ಬೃಂದಾವನವನ್ನು ಅಮ್ಯೂಸ್ಮೆಂಟ್ ಪಾರ್ಕ್ ಹೆಸರಲ್ಲಿ ಅಭಿವೃದ್ಧಿ ಮಾಡಲಾಗುವುದು. ಆ ಮೂಲಕ ಹತ್ತು ಸಾವಿರ ಉದ್ಯೋಗ ಸೃಷ್ಟಿಗೆ ಕ್ರಮ. ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇರುವ ಜಮೀನು ಸಾಕು. Public Private Partnership ಅಡಿ ಅನುಷ್ಠಾನ ಮಾಡಲಾಗುವುದು. ಜಲಾಶಯದ ಭದ್ರತೆ ನಮಗೆ ನಮಗೆ ಮುಖ್ಯ. ಗಣಿಗಾರಿಕೆಗಿಂತ ನಮಗೆ ಡ್ಯಾಂ ಮುಖ್ಯ. ಸಿಎಂ, ಸಚಿವರೆಲ್ಲರೂ ಸೇರಿ ತೀರ್ಮಾನ ಮಾಡ್ತೇವೆ" ಎಂದರು.
"ಜುಲೈ 27ಕ್ಕೆ ಸಿಎಂ ಕಾವೇರಿ ನದಿಗೆ ಬಾಗಿನ ಅರ್ಪಣೆ ಮಾಡುವುದು ಅನುಮಾನ. ಅಧಿವೇಶನದ ಬಳಿಕ ಶುಭ ಮುಹೂರ್ತ ನೋಡಿ ದಿನಾಂಕ ನಿಗದಿ ಮಾಡಲಾಗುವುದು" ಎಂದು ಡಿಕೆಶಿ ತಿಳಿಸಿದರು.
ಸರ್ವಪಕ್ಷಗಳ ಸಭೆಗೂ ಮೊದಲೇ ಡ್ಯಾಂನಿಂದ ನೀರು ಬಿಡುಗಡೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, "ಯಾರೋ ಮಾತನಾಡ್ತಾರೆ ಅಂತ ನಾನು ಮಾತನಾಡಲ್ಲ. ಕೆಲವರಿಗೆ ಪ್ರಚಾರ ಬೇಕು ಅದಕ್ಕೆ ಮಾತನಾಡ್ತಾರೆ. ನನಗೇನು ಪ್ರಚಾರದ ಅವಶ್ಯಕತೆ ಇಲ್ಲ. ನಾನು ಯಾರಿಗೋ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಕರ್ತವ್ಯ, ನಾನುಂಟು- ರೈತರುಂಟು, ನಾನುಂಟು-ರಾಜ್ಯವುಂಟು. ಅವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ದೆ ಬರಲ್ಲ, ಏನು ಮಾಡೋದು?" ಎಂದು ವ್ಯಂಗ್ಯವಾಡಿದರು.
ನನ್ನ ಕಂಡರೆ ಕಾಂಗ್ರೆಸ್ನವರಿಗೆ ಭಯ ಎಂಬ ಹೆಚ್ಡಿಕೆ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸದೆ ಮೌನವಹಿಸಿದರು. ಮೇಕೆದಾಟು ಪ್ರಸ್ತಾವನೆ ಮುಂದುವರೆಸೋ ವಿಚಾರದ ಕುರಿತು, "ಕಾಲ ಅದಕ್ಕೆ ಉತ್ತರಿಸುತ್ತದೆ. ಈಗ ಅದರ ಬಗ್ಗೆ ಮಾತನಾಡಲ್ಲ" ಎಂದು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಗಂಗಾ ಆರತಿ ಮಾದರಿ ಕಾವೇರಿ ಆರತಿ ಮಾದರಿ ಮಾಡುತ್ತೇವೆ. ಅದಕ್ಕಾಗಿ ಮೈಸೂರು ಶಾಸಕರು ಕೂಡ 5 -6 ಜಾಗಗಳನ್ನು ಹುಡುಕುತ್ತಾರೆ. ಕೃಷಿ ಸಚಿವರ ಸಮ್ಮಖದಲ್ಲಿ ಸಂಬಂಧಪಟ್ಟ ಇಲಾಖೆಯವರು ಹೋಗ್ತಾರೆ. ಕಾವೇರಿ ಬೃಂದಾವನ ಗಾರ್ಡನ್ ಅನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ ಕಮಿಟಿ ಕ್ಲೀಯರೆನ್ಸ್ ಕೊಟ್ಟಿದ್ದಾರೆ." ಎಂದು ತಿಳಿಸಿದರು.
ಕಾವೇರಿ ಜಲಾಶಯ ಭರ್ತಿಯಾದ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು, ಸಚಿವ ಚಲುವರಾಯಸ್ವಾಮಿ ಅವರು, ಮಂಡ್ಯದ ಶಾಸಕರು ಕೆಆರ್ಎಸ್ಗೆ ಭೇಟಿ ಮಾಡಿ ವೀಕ್ಷಣೆ ಮಾಡಿದ್ದೇವೆ. ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ ಚರ್ಚೆ ಮಾಡಿ ಬಂದಿದ್ದೇವೆ. 11ರಿಂದ 13 ರವರೆಗೆ ದಿನಕ್ಕೆ 1 ಟಿಎಂಸಿ ಎಂಬಂತೆ 20 ಟಿಎಂಸಿ ನೀರು ಬಿಡಬೇಕಿತ್ತು. ಅದಕ್ಕೆ ಸರ್ವಪಕ್ಷ ಸಭೆ ಕರೆಸಿದ್ದೆವು ಎಂದು ತಿಳಿಸಿದರು.
"ಮಳೆರಾಯ ಕೃಪೆ ತೋರಿಸಿದ್ದಾನೆ. ಇವತ್ತು 30 ಟಿಎಂಸಿ ನೀರು ಬಿಳಿಗುಂಡ್ಲಿಗೆ ಹರಿದಿದೆ. ಸುಮಾರು 51 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇನ್ನೂ ಸಮಯ ಇದೆ. ಸಾಮಾನ್ಯವಾಗಿ 41.44 ಟಿಎಂಸಿ ನೀರು ಬಿಡಬೇಕು. ನಾವು ಈ ವರ್ಷ ಕಾಲದ ಮಿತಿ ಒಳಗೆ ನೀರು ಬಿಡುತ್ತೇವೆ. ರೈತರಿಗೆ ಅನುಕೂಲ ಆಗುವ ಥರ ಮಾಡುತ್ತೇವೆ. 1.71 ಲಕ್ಷ ರೈತರಿಗೆ ಬ್ಯಾಂಕ್ ಅಲ್ಲಿ ಸಾಲ ಕೊಡುವ ವ್ಯವಸ್ಥೆ ಆಗಿದೆ. ತಮಿಳುನಾಡಿಗೆ ನೀರು ಬಿಟ್ಟು ಉಳಿದಿದ್ದು, ಕೆರೆಗಳಿಗೆ, ಕಾಲುವೆಗಳಿಗೆ ಬಿಡುತ್ತೇವೆ. ಕಾಲುವೆಗಳನ್ನು ಕೂಡ ತೆರೆಯಲು ಸೂಚನೆ ಕೊಡುತ್ತೇವೆ "ಎಂದರು.