ದಾವಣಗೆರೆ: ಕೆಲ ತಿಂಗಳ ಹಿಂದೆ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಹನಿ ನೀರಿಗಾಗಿ ರೈತರು ಪರಿತಪಿಸುವ ಪರಿಸ್ಥಿತಿ ಇತ್ತು. ಬೆಳೆ ಬೆಳೆಯಲಾಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇದೀಗ ಜಿಲ್ಲೆಯಲ್ಲಿ ಮಳೆರಾಯ ಭರಪೂರ ಕೃಪೆ ತೋರಿದ್ದಾನೆ. ಸಾಲ ಮಾಡಿ ರೈತ ಬೆಳೆ ತೆಗೆದಿದ್ದಾನೆ. ಆದರೆ ಬೆಳೆಗಳ ಮೇಲೆ ಕಾಡು ಹಂದಿಗಳು ದಾಳಿ ಮಾಡುತ್ತಿವೆ. ಮೆಕ್ಕೆಜೋಳ, ಅಡಿಕೆ ತೋಟವನ್ನು ನಾಶಪಡಿಸುತ್ತಿದ್ದು, ರೈತನಿಗೆ ದಿಕ್ಕೇ ತೋಚದಂತಾಗಿದೆ.
ಚನ್ನಗಿರಿ ತಾಲೂಕಿನ ನಿಲೋಗಲ್ ಗ್ರಾಮದ ರೈತರು ಕರಡಿ, ಕಾಡು ಹಂದಿ ಉಪಟಳಕ್ಕೆ ಮೆಕ್ಕೆಜೋಳ, ಅಡಿಕೆ ತೋಟ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ರೈತ ಶಾಂತಕುಮಾರ್ ನಾಲ್ಕು ಎಕರೆ ಅಡಿಕೆ ತೋಟದ ಜೊತೆಗೆ, ಮಿಶ್ರ ಬೆಳೆಯಾಗಿ ಮೆಕ್ಕೆಜೋಳ ಬಿತ್ತಿದ್ದಾರೆ. ಕಾಡುಹಂದಿಗಳ ಉಪಟಳದಿಂದ ಬೆಳೆ ಉಳಿಸಿಕೊಳ್ಳುವುದು ಇವರಿಗೆ ಸವಾಲಾಗಿದೆ.
ಮೆಕ್ಕೆಜೋಳ ಬಿತ್ತಿದರೆ ಬೀಜವನ್ನು ಹೆಕ್ಕಿ ತೆಗೆದು ನಾಶಪಡಿಸುತ್ತಿವೆ. ಕಾಡು ಹಂದಿಗಳಿಗೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ರೈತರ ದೂರು.
"ಕಾಡು ಹಂದಿಗಳ ಉಪಟಳದಿಂದ ಸಾಕಾಗಿ ಹೋಗಿದೆ. ನಾಲ್ಕು ಎಕರೆಯಲ್ಲಿದ್ದ 20ಕ್ಕೂ ಹೆಚ್ಚು ಅಡಿಕೆ ಸಸಿಗಳು, ಮೆಕ್ಕೆಜೋಳ ನಾಶಪಡಿಸಿವೆ. ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನೂ ಹೆಕ್ಕಿ ತೆಗೆದು ಹಾಳು ಮಾಡಿವೆ. ರಾತ್ರಿ ವೇಳೆ ಗುಂಪು ಗುಂಪಾಗಿ ದಾಳಿ ಮಾಡುತ್ತಿವೆ'' ಎಂದು ರೈತ ಶಾಂತರಾಜ್ ಅಳಲು ತೋಡಿಕೊಂಡರು.
ಯುವ ರೈತ ಅನುಕುಮಾರ್ ಪ್ರತಿಕ್ರಿಯಿಸಿ, "ಬಿತ್ತನೆಗೆ ಎಂಟು ದಿನ ಬೇಕಾಗುತ್ತದೆ. ನಾವು ಬಿತ್ತನೆ ಮಾಡುವ ಬೀಜಗಳನ್ನು ಆರಿಸಿ ತಿಂದು ಹಾಳು ಮಾಡುತ್ತಿವೆ. ಫಸಲು ಕೈಗೆ ಬರದಂತಾಗಿದೆ. ಇದೀಗ ನಾಲ್ಕು ಎಕರೆಯಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದೇವೆ. ಗಿಡಗಳನ್ನು ಕಿತ್ತು ಹಾಕಿವೆ. ಅರಣ್ಯ ಇಲಾಖೆ ಗಮನಕ್ಕೆ ತಂದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದರು.
ಇದನ್ನೂ ಓದಿ: ಹಾವೇರಿಯಲ್ಲಿ ಧಾರಾಕಾರ ಮಳೆ ; ಬೆಳೆಗಳು ಜಲಾವೃತ, ಕಂಗಾಲಾದ ರೈತರು - Crop damage by Flood water