ಕಾರವಾರ (ಉತ್ತರ ಕನ್ನಡ): ಮತದಾನಕ್ಕೆ ಗ್ರಾಮದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಹಾಗೂ ಮೂಲ ಸೌಲಭ್ಯ ಪೂರೈಸದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಬಸಾಪುರ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಮೂಲಕ ಮತದಾನದಿಂದ ದೂರ ಉಳಿದಿದ್ದರು. ಆದರೆ, ಜಿಲ್ಲಾಧಿಕಾರಿಗಳ ಭರವಸೆಯ ನಂತರ ಸಂಜೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದ ಗ್ರಾಮಸ್ಥರು ಕಳೆದ 45 ವರ್ಷಗಳಿಂದ ಸುಮಾರು 3 ಕಿ.ಮೀ ನಡೆದುಕೊಂಡೆ ನಂದಿಕಟ್ಟಾ ಗ್ರಾಮಕ್ಕೆ ತೆರಳಿ ಮತ ಚಲಾಯಿಸಬೇಕಾಗಿದೆ. ಗ್ರಾಮದಲ್ಲಿ 300ಕ್ಕೂ ಹೆಚ್ಚು ಮತದಾರರು ಇದ್ದರೂ ಈವರೆಗೂ ಗ್ರಾಮದಲ್ಲಿ ಪ್ರತ್ಯೇಕ ಮತದಾನ ಕೇಂದ್ರವನ್ನು ಸ್ಥಾಪಿಸಿಲ್ಲ.
ಹಲವಾರು ವರ್ಷಗಳಿಂದ ಬಸಾಪುರ ಗ್ರಾಮವನ್ನು ಪ್ರತ್ಯೇಕ ವಾರ್ಡ್ ವಿಂಗಡಣೆ, ಕಂದಾಯ ಗ್ರಾಮವನ್ನಾಗಿಸುವುದು ಹಾಗೂ ಗ್ರಾಮದಲ್ಲಿ ಪ್ರತ್ಯೇಕ ಮತದಾರರ ಕೇಂದ್ರ ಸ್ಥಾಪಿಸುವಂತೆ ಮನವಿ ಸಲ್ಲಿಸಿದರೂ ತಾಲೂಕು ಆಡಳಿತ ಮಾತ್ರ ಈವರೆಗೂ ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ. ಈ ಸಂಬಂಧ 2024ರ ಲೋಕಸಭಾ ಚುನಾವಣೆಯ ಮತದಾನದಿಂದ ಸ್ವಯಂಪ್ರೇರಿತವಾಗಿ ಗ್ರಾಮದ ಸಮಸ್ತ ಮತದಾರರು ಮತದಾನ ಮಾಡದೇ ದೂರ ಉಳಿದಿದ್ದರು.
ಮತದಾನ ಬಹಿಷ್ಕಾರದ ವಿಷಯ ತಿಳಿದು ಗ್ರಾಮಕ್ಕೆ ತಹಶೀಲ್ದಾರ್ ಶಂಕರ ಗೌಡಿ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ತಹಶೀಲ್ದಾರ್ ಅವರ ಯಾವುದೇ ಮಾತನ್ನು ಕೇಳದೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಭರವಸೆ ನೀಡಿದ್ದಲ್ಲಿ ಮಾತ್ರ ಮತದಾನ ಬಹಿಷ್ಕಾರ ಹಿಂತೆಗೆದುಕೊಳ್ಳುವುದಾಗಿ ಗ್ರಾಮಸ್ಥರು ಹೇಳಿದರು.
ನಂತರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಗ್ರಾಮಸ್ಥರ ಜೊತೆ ಕರೆ ಮಾಡಿ ಮಾತನಾಡಿ, ಗ್ರಾಮದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಹಾಗೂ ಮೂಲ ಸೌಲಭ್ಯ ಒದಗಿಸುವ ಭರವಸೆ ನೀಡಿದ ನಂತರ, ಬಸಾಪುರ ಗ್ರಾಮಸ್ಥರು ಸಂಜೆ ಮತದಾನ ಮಾಡಲು ಮತಗಟ್ಟೆಯತ್ತ ತೆರಳಿ ಮತದಾನ ಮಾಡಿದರು.
ಇದನ್ನೂ ಓದಿ : ದಾವಣಗೆರೆ ಮತದಾರರಿಗೆ ಬಂಪರ್ ಆಫರ್: ವೋಟ್ ಮಾಡಿದರಿಗೆ ಇಎನ್ಟಿ ಡಾಕ್ಟರ್ರಿಂದ 4 ದಿನ ಉಚಿತ ಚಿಕಿತ್ಸೆ! - Free Treatment