ಗದಗ: ಪ್ರಜ್ವಲ್ ರೇವಣ್ಣ ಸದ್ಯ ಸಂಸದರಿದ್ದಾರೆ. ಕಳೆದ ಬಾರಿ ಅವರ ಪರ ಪ್ರಚಾರ ಮಾಡಿದವರು, ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದವರು ಕಾಂಗ್ರೆಸ್‌ನವರೇ. ಈಗ ನಮ್ಮ ಮೇಲೆ ಯಾಕೆ ಆಪಾದನೆ ಮಾಡುತ್ತೀರಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಬಗ್ಗೆ ಬಿಜೆಪಿ ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕೆಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿ -ಜೆಡಿಎಸ್ ಮೈತ್ರಿ ಪಕ್ಷಗಳಾಗಿವೆ. ಚುನಾವಣಾ ಫಲಿತಾಂಶ ಬಂದಿಲ್ಲ, ಫಲಿತಾಂಶ ಬಂದ ಮೇಲೆ ಪ್ರಜ್ವಲ್ ರೇವಣ್ಣ ಎನ್ಡಿಎ ಗೆಲುವಿನ ಅಭ್ಯರ್ಥಿ ಆಗುತ್ತಾರೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಸಿಟ್ಟಿಂಗ್ ಎಂಪಿ. ಈ ಹಿಂದೆ ಕಾಂಗ್ರೆಸ್‌ನವರೇ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಮೊದಲು ಅವರು ಉತ್ತರ ಕೊಡಬೇಕು, ನಾವಲ್ಲ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನವರು ಬಹಳ ಅರ್ಜೆಂಟಾಗಿ ಎಸ್ಐಟಿ ರಚನೆ ಮಾಡಿದ್ದಾರೆ. ಎಸ್ಐಟಿ ಏನು ವರದಿ ಕೊಡುತ್ತದೆ, ನ್ಯಾಯಾಲಯ ಏನು ತೀರ್ಪು ಕೊಡುತ್ತದೋ ಅದಕ್ಕೆ ತಲೆಬಾಗಲೇ ಬೇಕು. ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು. ಕಾನೂನಿನ ಅಡಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ನ್ಯಾಯಾಲಯ ತೆಗೆದುಕೊಳ್ಳುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳು ಯಾವ ಅಭ್ಯರ್ಥಿ, ಪಕ್ಷಕ್ಕೂ ಸಂಬಂಧಪಟ್ಟಿಲ್ಲ: ಜಿ.ಟಿ.ದೇವೇಗೌಡ - Hassan Pen Drive Case