ಬೆಂಗಳೂರು: ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ. ಯಾರೂ ಆ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ವಿಚಾರಣೆ ಆಯೋಗದ ಶಿಫಾರಸ್ಸು ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಉಸ್ತುವಾರಿ ಹಾಗೂ ಅಧಿಕಾರಿಗಳ ಸಮಿತಿ ವರದಿ ಪರಾಮರ್ಶೆ ಹಾಗೂ ಶಿಫಾರಸ್ಸು ಕುರಿತು ವಿಧಾನಸೌಧದಲ್ಲಿ ಉಪಸಮಿತಿಯು ಶನಿವಾರ ನಡೆಸಿದ ಸಭೆ ಬಳಿಕ ಅವರು ಮಾತನಾಡಿದರು.
ಸಿಎಂ ವಿಚಾರವಾಗಿ ಒಪ್ಪಂದ ಆಗಿರುವುದು ನಿಜ ಎಂಬ ಮುನಿಯಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಒಪ್ಪಂದದ ವಿಚಾರವಾಗಿ ಯಾರೊಬ್ಬರು ಚರ್ಚೆ ಮಾಡಬಾರದು. ನಾವು ಮತ್ತು ಅವರು ರಾಜಕೀಯವಾಗಿ ಕೆಲವು ಸಹಕಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನನಗೆ ಯಾವುದೇ ಸೂತ್ರವೂ ಇಲ್ಲ. ಮುಖ್ಯಮಂತ್ರಿಗಳಿಗೆ ಕೆಲವು ಜವಾಬ್ದಾರಿ ವಹಿಸಿದ್ದು, ನನಗೆ ಕೆಲವು ಜವಾಬ್ದಾರಿ ವಹಿಸಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತಿದ್ದು, ಈ ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭವಿಲ್ಲ. ಸಿಎಂ ಹೇಳಿದ್ದೇ ಅಂತಿಮ ಎಂದು ನಾನು ಈಗಾಗಲೇ ಹೇಳಿದ್ದೇನೆ. ಅಧಿಕಾರ ಹಂಚಿಕೆ ಸೂತ್ರ ವಿಚಾರವಾಗಿ ಗೊಂದಲಗಳಿಗೆ ಸಿದ್ದರಾಮಯ್ಯನವರು ಕೂಡ ತೆರೆ ಎಳೆದಿದ್ದಾರೆ. ಆ ರೀತಿ ಯಾವುದೇ ಒಪ್ಪಂದ ಆಗಿಲ್ಲ ಅಂತಾ ಅವರು ಕೂಡ ಹೇಳಿದ್ದಾರೆ. ಅದೇ ಅಂತಿಮ, ಅಲ್ಲಿಗೆ ಆ ಚರ್ಚೆ ಮುಗಿಯಿತು ಎಂದು ಡಿಸಿಎಂ ಹೇಳಿದರು.
ಇದನ್ನೂ ಓದಿ: ನಮ್ಮ ಚೀಫ್ ಮಿನಿಸ್ಟರ್ ಹೇಳಿದ್ಮೇಲೆ ಅದೇ ಫೈನಲ್: ಡಿಸಿಎಂ ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಐದು ವರ್ಷ ಸಿಎಂ: ಚಾಮರಾಜನಗರದ ಯಳಂದೂರಲ್ಲಿ ಶನಿವಾರ 100 ಹಾಸಿಗೆಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಜನರ ಆಶೀರ್ವಾದ ಇರುವ ತನಕ ಸಿದ್ದರಾಮಯ್ಯನವರ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ಮತ್ತು ಬೆಂಬೆಲದಿಂದ ಸಿದ್ದರಾಮಯ್ಯನವರು ಸಂಪೂರ್ಣವಾಗಿ 5 ವರ್ಷಗಳ ಕಾಲ ಮುಂದುವರೆಯುತ್ತಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರಿಗೆ ನಿಮ್ಮ ಬೆಂಬಲ ಅಗತ್ಯ ಎಂದಿದ್ದಾರೆ.