ಧಾರವಾಡ: ಸಿಎಂ ಸ್ಥಾನದ ಬಗ್ಗೆ ಜಮೀರ್ ಅಹ್ಮದ ಆಸೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ "ಆಸೆ ಇರುವುದು ಬೇರೆ, ದುರಾಸೆ ಮಾಡುವುದು ಬೇರೆ. ನನಗಂತೂ ಸಿಎಂ ಸ್ಥಾನದ ಮೇಲೆ ಯಾವುದೇ ಆಸೆ ಇಲ್ಲ, ನಾನು ಸಿಎಂ ರೇಸ್ನಲ್ಲಿಯೂ ಇಲ್ಲ. ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಐದು ವರ್ಷದ ಸಿಎಂ. ಇಲ್ಲಿಗೆ ಈ ವಿಷಯ ಎಂಡ್" ಎಂದು ಹೇಳಿದ್ದಾರೆ.
ಧಾರವಾಡದ ಜಿಲ್ಲಾ ಸಂಭಾಂಗಣದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಅವರ ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿ "ಸಚಿವ ಸತೀಶ್ ಜಾರಕಿಹೊಳಿ ಓರ್ವ ಜವಾಬ್ದಾರಿಯುತ ಸಚಿವರು, ಅವರು ದೆಹಲಿಗೆ ಹೋಗಬೇಕಾಗುತ್ತದೆ. ತಮ್ಮ ಇಲಾಖೆ ಸಂಬಂಧ ಗಡ್ಕರಿ ಅವರ ಭೇಟಿಗಾಗಿ ಹೋಗುತ್ತಾರೆ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ" ಎಂದು ತಿಳಿಸಿದರು.
"ಅವರ ನಾಯಕತ್ವದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಡಿಕೆಶಿ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ನಮಗೂ ಚುರುಕು ಮೂಡಿಸಿದ್ದಾರೆ. ನಾನು ಯಾವ ರೇಸ್ನಲ್ಲಿಯೂ ಇಲ್ಲ. ಮಾಧ್ಯಮಗಳ ರೇಸ್ನಲ್ಲಿ ಮಾತ್ರ. ಪೂಜ್ಯ ಗುರುಗಳು ಹೇಳಿದ್ದಕ್ಕೆ ನಾನು ಪ್ರತಿಕ್ರಿಯೆ ನೀಡಲಾರೆ. ಮದ್ಯಸೇವನೆ ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಆಗಿಲ್ಲ. ನಮ್ಮ ಅಜ್ಜ ಮುತ್ತಜ್ಜರ ಕಾಲದಿಂದಲೂ ಇದೆ. ಕೆಲವರು ಬಯಲಿನಲ್ಲಿ ಕುಡಿಯುತ್ತಾರೆ. ಇನ್ನು ಕೆಲವರು ಕದ್ದು ಮುಚ್ಚಿ ಕುಡಿಯುತ್ತಾರೆ. ಅದರ ಮೇಲೆಯೇ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದೆ. ಅದನ್ನು ನೋಡುತ್ತಾರೆ, ಮತ್ತೆ ಕುಡಿಯುತ್ತಾರೆ. ನಾವೇನು ಮನೆ ಮನೆಗೆ ಹೋಗಿ ಹೇಳಲು ಆಗುತ್ತಾ?" ಎಂದು ಪ್ರಶ್ನಿಸಿದರು.
ಬಿಜೆಪಿ ವ್ಯಂಗ್ಯಕ್ಕೂ ಟಾಂಟ್: ಆರ್.ವಿ.ದೇಶಪಾಂಡೆ ಹೇಳಿಕೆಗೆ ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿ ಅವರು, "ನನಗೆ ಏನು ಗೊತ್ತಿಲ್ಲ. ಬಿಜೆಪಿಯಲ್ಲಿರುವ ಹೊಡೆದಾಟವನ್ನು ಅವರು ಮೊದಲು ಸುಧಾರಿಸಿಕೊಳ್ಳಲಿ ನಮ್ಮ ಪಕ್ಷ ಗಟ್ಟಿಯಾಗಿದೆ" ಎಂದು ಟಾಂಗ್ ನೀಡಿದ್ದಾರೆ.
ಐದು ತಿಂಗಳಿಂದ ಅಂಗನವಾಡಿ ಸಹಾಯಕಿಯರ ಗೌರವ ವೇತನ ಬರದೇ ಇರುವ ಕುರಿತು ಮಾತನಾಡಿದ ಅವರು, "ಅಂಗನವಾಡಿ ಸಹಾಯಕಿಯರಿಗೆ ಪ್ರತಿ ತಿಂಗಳು ವೇತನ ಆಗಬೇಕು. ಅವರು ಬಡವರು, ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಆಡಳಿತ ಸುಧಾರಣೆಯ ಅಧ್ಯಕ್ಷನಾಗಿ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಆದಷ್ಟು ಬೇಗ ವೇತನ ಹಾಕಿಸಲಾಗುವುದು" ಎಂದು ಭರವಸೆ ನೀಡಿದರು.
ಅಂಗನವಾಡಿ ಸಹಾಯಕಿಯರ ವೇತನ ಬಿಡುಗಡೆ ವಿಚಾರ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸಿದ್ದನ್ನು ಸಮರ್ಥನೆ ಮಾಡಿಕೊಂಡ ಆರ್.ವಿ. ದೇಶಪಾಂಡೆ, "ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸೇರಿ ವೇತನ ಆಗುತ್ತದೆ. ಅದರೆ ಕೇಂದ್ರದಿಂದ ಬರುವ ಹಣ ಬಿಡುಗಡೆಯಾಗಿಲ್ಲ. ಅದಕ್ಕೆ ಅವರೇನೂ ಮಾಡಬೇಕು" ಎಂದು ಹೇಳಿದರು. ರಾಜಕೀಯ ಯಾವುದೇ ರೀತಿಯ ಪ್ರತಿಕ್ರಿಯೆಗೆ ದೇಶಪಾಂಡೆ ನಿರಾಕರಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ: ಆರ್.ವಿ. ದೇಶಪಾಂಡೆ - RV Deshapande