ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಸಂಸತ್ತಿನಲ್ಲಿ ಅನುಮೋದನೆಗೊಂಡಿದ್ದ ನಾಗರೀಕ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಅಧಿಸೂಚನೆಯನ್ನ ನಿನ್ನೆಯಷ್ಟೇ ಕೇಂದ್ರ ಸರ್ಕಾರ ಪ್ರಕಟಿಸಿದ ಬೆನ್ನಲೇ ಮುಂಜಾಗ್ರತ ಕ್ರಮವಾಗಿ ನಗರ ಪೊಲೀಸರು ಎಚ್ಚರ ವಹಿಸಿದ್ದಾರೆ.
ಸಿಎಎ ಕುರಿತಂತೆ ನಿನ್ನೆಯಷ್ಟೇ ಅಧಿಸೂಚನೆ ಹೊರಡಿಸಲಾಗಿದೆ. ಪರ - ವಿರೋಧ ವ್ಯಕ್ತವಾಗುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಇದುವರೆಗೂ ಪ್ರತಿಭಟನೆಗೆ ಅನುಮತಿ ಕೋರಿ ಯಾವುದೇ ಪತ್ರ ಬಂದಿಲ್ಲ. ಆಯಾ ವಿಭಾಗದ ಡಿಸಿಪಿಗಳಿಗೆ ತಮ್ಮ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಲೋಕಸಭಾ ಚುನಾವಣಾ ದೃಷ್ಠಿಯಿಂದ ಸಿಐಎಸ್ಎಫ್ ಪಡೆಯು ನಗರಕ್ಕೆ ಆಗಮಿಸಿದ್ದು ಈಗಾಗಲೇ ವಲಯವಾರು ರೂಟ್ ಮಾರ್ಚ್ ಮಾಡಲಾಗಿದೆ. ಸಂದರ್ಭ ಅನುಸಾರಾವಾಗಿ ಕೇಂದ್ರದ ಅರಸೇನಾ ಪಡೆಯನ್ನ ಬಳಸಿಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಅಧಿಸೂಚನೆ ಬೆನ್ನಲೇ ನಗರದ ಸೂಕ್ಷ್ಮಪ್ರದೇಶಗಳಾದ ಡಿ.ಜಿ.ಹಳ್ಳಿ, ಕೆ.ಜಿ.ಹಳ್ಳಿ, ಶಿವಾಜಿನಗರ, ಜೆ.ಜೆ.ನಗರ, ಚಾಮರಾಜಪೇಟೆ, ಸುದ್ದುಗುಂಟೆಪಾಳ್ಯ ಹಾಗೂ ಆರ್.ಟಿ.ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
2019ರಲ್ಲಿ ಅಂಗೀಕರಿಸಲಾಗಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ 2019 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೋಮವಾರ ಜಾರಿಗೆ ತಂದಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು, ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಭಾರತೀಯ ನಾಗರಿಕತ್ವವನ್ನು ನೀಡುವ ಕಾಯ್ದೆಯಾಗಿದೆ.
ಇದನ್ನೂ ಓದಿ: ಸಿಎಎ ಜಾರಿ: ಕೇಂದ್ರದ ನಿರ್ಧಾರಕ್ಕೆ ಪರ- ವಿರೋಧ; ಹೀಗಿದೆ ರಾಜಕೀಯ ನಾಯಕರ ಪ್ರತಿಕ್ರಿಯೆ