ಬೆಂಗಳೂರು: ಅಧಿಕಾರ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಯೋಗೇಶ್ವರ್ ಹೋಗುತ್ತಾರೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ನಿಖಿಲ್ ಮಾತನಾಡಿದರು.
ಯೋಗೇಶ್ವರ್ ಅವರಿಗೆ 25 ವರ್ಷದ ರಾಜಕೀಯ ಅನುಭವವಿದೆ. ಅವರು ಒಂದು ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡಿಲ್ಲ. ಎಲ್ಲಿ ಅಧಿಕಾರ ಸಿಗುತ್ತೋ ಅಲ್ಲಿಗೆ ಜಂಪ್ ಆಗ್ತಾರೆ ಎಂದು ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ನಾಯಕರ ಕಾರಣಕ್ಕೆ ಯೋಗೇಶ್ವರ್ ಪಕ್ಷ ಬಿಡುವ ವಿಚಾರ ಮಾಡಿಲ್ಲ. ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಜೆಡಿಎಸ್ ಪಕ್ಷದಲ್ಲೇ ಅವರು ಸ್ಪರ್ಧೆ ಮಾಡಬಹುದಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಬಹುದಿತ್ತು. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ. ಕಳೆದ ಎರಡು ತಿಂಗಳಿಂದ ಯೋಗೇಶ್ವರ್ ಕಾಂಗ್ರೆಸ್ ಅವರ ಜೊತೆ ಸಂಪರ್ಕದಲಿದ್ದರು. ರಾಜಕಾರಣವನ್ನು ಅಳೆದುತೂಗಿ ಮಾಡುವ ಬುದ್ದಿಜೀವಿಗಳಿಗೆ ಮುಂದಿನ ಜೀವನ ಹೇಗಿರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಬಳಿ 136 ಶಾಸಕರಿದ್ದಾರೆ. ಹೆಸರಿಗೆ ರಾಷ್ಟ್ರೀಯ ಪಕ್ಷ. ಆದರೆ, ಅವರ ಬಳಿ ಅಭ್ಯರ್ಥಿ ಇಲ್ಲ. ಆಪರೇಷನ್ ಹಸ್ತ ಮಾಡಿದರು. ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸಹೋದರ ಡಿ.ಕೆ.ಸುರೇಶ್ ಅವರ ಸ್ಪರ್ಧೆ ಮಾಡುತ್ತಾರೆ ಎಂದು ಕಥೆ ಕಟ್ಟಲಾಯಿತು. ಈಗ ಯೋಗೇಶ್ವರ್ ಅವರಿಗೆ ಮಣೆ ಹಾಕಿರುವುದು ಆ ಪಕ್ಷದ ದುಃಸ್ಥಿತಿಗೆ ಹಿಡಿದ ಕನ್ನಡಿ ಎಂದು ನಿಖಿಲ್ ಹೇಳಿದರು.
ಡಿ.ಕೆ.ಸುರೇಶ್ ಧೈರ್ಯ ಮಾಡಲಿಲ್ಲ ಯಾಕೆ? : ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಸಚಿವರೂ ಸೇರಿದಂತೆ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಯಾಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಧೈರ್ಯ ಮಾಡಲಿಲ್ಲ? ಡಿ.ಕೆ.ಸುರೇಶ್ ನಿಲ್ಲುವ ಧೈರ್ಯ ಪ್ರದರ್ಶನ ಮಾಡಲಿಲ್ಲ ಯಾಕೆ?, ಹೊರಗಿನಿಂದ ಹೈಜಾಕ್ ಮಾಡಿ ಅಭ್ಯರ್ಥಿ ಮಾಡ್ತಿದ್ದಾರೆ ಯಾಕೆ? ಎಂದು ನಿಖಿಲ್ ಪ್ರಶ್ನಿಸಿದರು.
ನಾನು ಸ್ಪರ್ಧೆ ಮಾಡ್ತೀನಿ ಅಂತ ಹೇಳಿಲ್ಲ : ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ವಿಚಾರಕ್ಕೆ ಮಾತನಾಡಿದ ಅವರು, ನಾನು ಎರಡು ತಿಂಗಳಿಂದ ಹೇಳಿಕೆ ಕೊಡ್ತಾ ಇದ್ದೇನೆ. ನಾನು ಸ್ಪರ್ಧೆ ಮಾಡ್ತೀನಿ ಎಂದು ಎಲ್ಲೂ ಹೇಳಿಕೆ ನೀಡಿಲ್ಲ. ಎನ್ಡಿಎಯಿಂದ ಫೈನಲ್ ಅಭ್ಯರ್ಥಿ ಘೋಷಣೆ ಆಗಬೇಕು ಎಂದು ಹೇಳಿದರು.
ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ಕಟ್ಟಿರೋ ಪಕ್ಷ ನಮ್ಮದು. ಎರಡು ಪಕ್ಷದ ಮುಖಂಡರು ಕುಳಿತು ಚರ್ಚೆ ಮಾಡಿ ಅಭ್ಯರ್ಥಿಯನ್ನ ತೀರ್ಮಾನ ಮಾಡ್ತಾರೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ಸಿಕ್ಕಿದ್ರೆ ಅದು ನಿಖಿಲ್ ಕುಮಾರಸ್ವಾಮಿಗೆ ಸಿಕ್ಕ ಅಧಿಕಾರ ಎಂದರು.
ನಮ್ಮ ಎನ್ಡಿಎ ಸಂಬಂಧಕ್ಕೆ ಯಾವುದೇ ಚ್ಯುತಿ ಬರಬಾರದು. ಇವತ್ತು ಸೋಲು ಗೆಲುವು ನಿರ್ಧಾರ ಮಾಡೋದು ಜನರು. ಚನ್ನಪಟ್ಟಣದಲ್ಲಿ ಯಾವ ರೀತಿ ರಾಜಕೀಯವಾಗಿ ಬೆಳವಣಿಗೆ ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿನ ಜನರು ಪ್ರಬುದ್ಧರಿದ್ದಾರೆ. ನ.13ರಂದು ಅವರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ದೇವೇಗೌಡರು ಕರೆ ಮಾಡಿದ್ದರು, ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದರು ಎಂದು ತಿಳಿಸಿದರು.
ಇದನ್ನೂ ಓದಿ: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಕೈ ಹಿಡಿದ ಯೋಗೇಶ್ವರ್ಗೆ ಚನ್ನಪಟ್ಟಣ ಟಿಕೆಟ್, ಶಿಗ್ಗಾಂವಿ ಸಸ್ಪೆನ್ಸ್