ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹಣದ ಉಳಿತಾಯದ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಹಲವು ಕ್ರಮ ಕೈಗೊಂಡಿದೆ. ಸದ್ಯ ನಿರುಪಯುಕ್ತವಾದ ಬಸ್‌ಗಳನ್ನು ನವೀಕರಣಗೊಳಿಸಿ, ಪುನರ್ ಬಳಕೆಗೆ ಆದ್ಯತೆ ನೀಡಿದೆ.
ಹುಬ್ಬಳ್ಳಿಯಲ್ಲಿ ಇರುವ ಸಂಸ್ಥೆಯ ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ಹಳೆಯ 100 ಬಸ್‌ಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ತಲಾ ಬಸ್‌ಗೆ 8 ಲಕ್ಷ ರೂ.ಗಳಂತೆ ಒಟ್ಟು 8 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್‌ಗಳು ಹೊಸ ರೂಪ ಪಡೆಯುತ್ತಿವೆ. ಪೂರ್ಣ ಪ್ರಮಾಣದಲ್ಲಿ ಅವು ಸಿದ್ಧಗೊಂಡು ರಸ್ತೆಗೆ ಇಳಿಯಲಿವೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಬರುತ್ತವೆ. ಹದಗೆಟ್ಟ ರಸ್ತೆಗಳು, ಅತಿಯಾದ, ಬಳಕೆ, ಗುಣಮಟ್ಟದ ಕೊರತೆಯಿಂದ ಅಪಘಾತ ಮುಂತಾದ ಕಾರಣಗಳಿಂದ ಹಾಳಾದ ಬಸ್‌ಗಳನ್ನು ದುರಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುವುದೇನು?: ''ಸಂಸ್ಥೆ ವ್ತಾಪ್ತಿಯ 6 ಜಿಲ್ಲೆಗಳ 10 ವರ್ಷಗಳಿಂದ ಸಂಚರಿಸಿದ 100 ಬಸ್‌ಗಳನ್ನು ದುರಸ್ತಿಗೆ ಆಯ್ಕೆ ಮಾಡಿದ್ದೇವೆ. ಅವುಗಳ ಎಂಜಿನ್ ಸುಸ್ಥಿತಿಯಲ್ಲಿವೆ. ಪ್ರಯಾಣಿಕರ ಆಸನ, ಕವಚ, ಕಿಟಕಿಯ ಗಾಜು, ನೆಲಹಾಸು ಮುಂತಾದವು ಹೊಸದಾಗಿ ಅಳವಡಿಸುತ್ತೇವೆ. ಈಗಾಗಲೇ 68 ಬಸ್‌ಗಳ ನವೀಕರಣ ಪೂರ್ಣಗೊಂಡಿದೆ. ಇನ್ನೂ 32 ಬಸ್‌ಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದೆ'' ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಚೇರಿಯ ಕಾರ್ಯ ವ್ಯವಸ್ಥಾಪಕ ಶ್ರೀನಾಥ ಟಿ.ಎಲ್. ಮಾಹಿತಿ ನೀಡಿದ್ದಾರೆ.

''100 ಬಸ್‌ಗಳ ಒಟ್ಟಾರೆ ನವೀಕರಣಕ್ಕೆ 8 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, ಸದ್ಬಳಕೆಯಾಗುತ್ತದೆ. ಬಸ್‌ಗಳನ್ನು ದುರಸ್ತಿಪಡಿಸಿ, ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಬಸ್‌ಗಳನ್ನು ಪೂರೈಸಲು ಸಾಧ್ಯವಾಗುತ್ತದೆ'' ಎಂದರು.
ಅಧಿಕಾರಿಗಳ ಪ್ರಕಾರ, ಒಂದು ಹೊಸ ಬಸ್ ಖರೀದಿಗೆ ಕನಿಷ್ಟ 45 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಹಳೆಯ ಬಸ್‌ಗಳಿಗೆ ಹೊಸ ಸ್ಪರ್ಶ ನೀಡಿದರೆ, ಸಂಸ್ಥೆಗೆ ಹಣದ ಉಳಿತಾಯವಾಗುತ್ತದೆ. ಅಲ್ಲದೇ, ಗುಜರಿಗೆ ಸೇರಬೇಕಾದ ಬಸ್‌ಗಳನ್ನು ಪುನರ್ ಬಳಕೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸಂಸ್ಥೆಗೆ ಆರ್ಥಿಕ ಹೊರೆ ತಪ್ಪಿದಂತಾಗಿದೆ.

ಇದನ್ನೂ ಓದಿ: ಪಂಚ ಗ್ಯಾರಂಟಿಗಳ ಹೊರೆ ಮಧ್ಯೆ ಅಭಿವೃದ್ಧಿ ಕೆಲಸಗಳ ಬಂಡವಾಳ ವೆಚ್ಚಕ್ಕೆ ಅತ್ಯಲ್ಪ ಹಣ ಖರ್ಚು - Capital Expenditure