ಬೆಳಗಾವಿ : ಭಾನುವಾರದ ರಜೆ ಒಂದು ಕಡೆ ಆದರೆ ಮತ್ತೊಂದೆಡೆ ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಡಬಲ್ ಧಮಾಕಾ ಸಿಕ್ಕಂತಾಗಿದೆ. ಸಾಂಪ್ರದಾಯಿಕ ವೈರಿಗಳನ್ನು ಕಟ್ಟಿಹಾಕಲು ಭಾರತ ತಂಡ ಸಜ್ಜಾಗಿದೆ. ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಟೀಂ ಇಂಡಿಯಾ ಪಣ ತೊಟ್ಟಿದ್ದು, ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಭಾರತೀಯರು ಕಾದು ಕುಳಿತಿದ್ದಾರೆ. ಇನ್ನು ಕುಂದಾನಗರಿ ಬೆಳಗಾವಿ ಕ್ರಿಕೆಟ್ ಪ್ರೇಮಿಗಳು ಕೂಡ ಗೆದ್ದು ಬಾ ಇಂಡಿಯಾ ಎಂದು ಶುಭ ಕೋರಿದ್ದಾರೆ.
ಇಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯಾಗಿದ್ದು ಕ್ರಿಕೆಟ್ ಜಗತ್ತಿನಲ್ಲಿ ಕುತೂಹಲ ಕೆರಳಿಸಿದೆ. ಇಡೀ ಭಾರತೀಯರ ಒಂದೇ ಒಂದು ಕೂಗು ಅದು ಪಾಕಿಸ್ತಾನ ವಿರುದ್ಧ ವಿಜಯದ ಪತಾಕೆ ಹಾರಿಸುವುದಾಗಿದೆ. ಬೆಳಗಾವಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಬೆಸ್ಟ್ ಆಪ್ ಲಕ್ ಹೇಳಿದ್ದಾರೆ. ಗೆದ್ದು ಬಾ ಇಂಡಿಯಾ ಎಂದು ಹುರಿದುಂಬಿಸಿದ್ದಾರೆ.
ಕ್ರಿಕೆಟ್ ಪ್ರೇಮಿ ರೇಣುಕಾ ಅವರು 'ಈಟಿವಿ ಭಾರತ' ಜೊತೆಗೆ ಮಾತನಾಡಿ, ಎದುರಾಳಿ ಪಾಕಿಸ್ತಾನದ ವಿರುದ್ಧ ನಮ್ಮ ಇಂಡಿಯಾ ಟೀಂ ಗೆದ್ದೇ ಗೆಲ್ಲುತ್ತದೆ. ನಮ್ಮ ಫೆವರೆಟ್ ವಿರಾಟ್ ಕೊಹ್ಲಿ ಇಂದು ಸೆಂಚುರಿ ಹೊಡೆದು ಗೆಲ್ಲಿಸಲಿದ್ದಾರೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾವೆಲ್ಲಾ ತುದಿಗಾಲ ಮೇಲೆ ನಿಂತಿದ್ದೇವೆ. ಭಾರತಾಂಬೆಗೆ ಜಯವಾಗಲಿ ಎಂದು ಹರ್ಷ ವ್ಯಕ್ತಪಡಿಸಿದರು.

ಭಾರತ ತಂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ. ನೂರಕ್ಕೆ ಎರಡನೂರು ಪರ್ಸಂಟ್ ಗೆಲ್ಲುತ್ತಾರೆ. ಗೆದ್ದು ದುಬೈನಲ್ಲಿ ಭಾರತದ ಬಾವುಟ ಹಾರಿಯೇ ಹಾರುತ್ತದೆ. ಮೊದಲು ನನ್ನ ಫೆವರೆಟ್ ಸಚಿನ್ ತೆಂಡೂಲ್ಕರ್ ಇದ್ದರು. ಈಗ ವಿರಾಟ್ ಕೊಹ್ಲಿ, ಶುಭಮನ್ ಗಿಲ್. ಇನ್ನು 11 ಆಟಗಾರರು ಫಾರ್ಮ್ ನಲ್ಲಿದ್ದಾರೆ. ಪಾಕಿಸ್ತಾನದ ವಿರುದ್ಧ ಗೆಲ್ಲಲೇಬೇಕು ಎಂದು ಕ್ರೀಡಾಭಿಮಾನಿ ಅರಸ್ ಪಾಟೀಲ ಅಭಿಪ್ರಾಯಪಟ್ಟರು.

ಶಾನು ಲಕ್ಕುಂಡಿ ಮಾತನಾಡಿ, ನಮ್ಮ ಭಾರತ ತಂಡಕ್ಕೆ ನಾವು ಶುಭ ಕೋರುತ್ತೇವೆ. 11 ಆಟಗಾರರು ಚನ್ನಾಗಿ ಆಡುವ ವಿಶ್ವಾಸ ನಮಗಿದೆ. ಮೊದಲು ಧೋನಿ ನಮ್ಮ ನೆಚ್ಚಿನ ಆಟಗಾರ ಆಗಿದ್ದರು. ಈಗ ಕೊಹ್ಲಿ ಅಭಿಮಾನಿ ನಾನು. ಹಾಗಾಗಿ, ಭಾರತ ತಂಡ ಪಾಕಿಸ್ತಾನ ವಿರುದ್ಧ ಅಷ್ಟೇ ಅಲ್ಲದೆ ಫೈನಲ್ ಪಂದ್ಯವನ್ನೂ ಗೆದ್ದು ನಮಗೆಲ್ಲಾ ಚಾಂಪಿಯನ್ಸ್ ಟ್ರೋಫಿ ಕಾಣಿಕೆಯನ್ನಾಗಿ ನೀಡಲಿ ಎಂದು ಆಶಿಸಿದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಹೈವೋಲ್ಟೇಜ್ ಪಂದ್ಯ; ಭಾರತದ ವಿರುದ್ಧ ಟಾಸ್ ಗೆದ್ದ ಪಾಕ್ ಬ್ಯಾಟಿಂಗ್