ಬೆಳಗಾವಿ: ದೇಶದಲ್ಲಿ 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, 400 ಅಲ್ಲ, 150 ಸ್ಥಾನಗಳೂ ಅವರಿಗೆ ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿಂದು ಚೊಂಬುಗಳಸಮೇತ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ ಅಂತಾ ಹೇಳಿದ್ದೆ. ಈ ಚುನಾವಣೆಯಲ್ಲಿ ನಾವು 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಅಚ್ಚರಿ ಸೀಟ್ ಬರುತ್ತದೆ ಕಾದುನೋಡಿ ಎಂದರು.
'ರಾಹುಲ್ ಗಾಂಧಿ ಪ್ರಧಾನಿಯಾಗಲಿ': ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ, ನಾವೆಲ್ಲರೂ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಬಯಸುತ್ತೇವೆ ಎಂದು ತಿಳಿಸಿದರು.
ಈವರೆಗಿನ ಅಭಿವೃದ್ಧಿ ಕೆಲಸಗಳು ಟ್ರೇಲರ್ ಮಾತ್ರ, ಪಿಕ್ಚರ್ ಬಾಕಿ ಇದೆ ಎಂಬ ಮೋದಿ ಹೇಳಿಕೆಗೆ, ಸಿನೆಮಾ ಆಗಿಯೇ ಇಲ್ಲ, ಟ್ರೆಲರ್ನಲ್ಲೇ ಮುಗಿದು ಹೋಗಿದೆ. ಕ್ಯಾಮೆರಾಮನ್, ಡೈರೆಕ್ಟರ್ ಓಡಿ ಹೋಗಿದ್ದಾರೆ. ಹೀರೋ ಅಂತೂ ಇಲ್ಲವೇ ಇಲ್ಲ. ವಿಲನ್ ಒಬ್ಬನೇ ಉಳಿದಿದ್ದಾನೆ ಎಂದು ಟಾಂಗ್ ಕೊಟ್ಟರು.
ಒಬಿಸಿ, ಎಸ್ಸಿ, ಎಸ್ಟಿ ವಿರೋಧಿಸುವುದು ಬಿಜೆಪಿ ಡಿಎನ್ಎಯಲ್ಲೇ ಇದೆ. ಮೋದಿ ಸರ್ಕಾರ ಸಂವಿಧಾನ ಮುಗಿಸುವ ಕೆಲಸ ಮಾಡುತ್ತದೆ. ನೇಹಾ ಹತ್ಯೆಯಲ್ಲಿ ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಆರೋಪಿ ಯಾವುದೇ ಸಮುದಾಯದವನಾದ್ರೂ ಗಲ್ಲು ಶಿಕ್ಷೆ ಆಗಬೇಕು. ಈಗಾಗಲೇ ನಮ್ಮ ಸರ್ಕಾರ ಸಿಐಡಿಗೆ ಕೇಸ್ ವಹಿಸಿದೆ. ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ವಿಚಾರಣೆ ಮಾಡಬೇಕು. ಸರ್ಕಾರವೇ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಅಂತಾ ಆಗ್ರಹಿಸುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ, ಅಶೋಕ ಪಟ್ಟಣ, ಗಣೇಶ ಹುಕ್ಕೇರಿ, ಆಸೀಫ್ ಸೇಠ್, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಸೇರಿ ಮತ್ತಿತರರು ಇದ್ದರು.