ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಹಳ್ಳಿಕಾರ್ ತಳಿಗಳ ಬಗ್ಗೆ ಕಟ್ಟುಕತೆ ಕಟ್ಟುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಿಗೆ ದೂರು ನೀಡಿದೆ.
ಈ ಕುರಿತು ನವ ಕರ್ನಾಟಕ ಯುವ ಶಕ್ತಿ ವೇದಿಕೆ ಅಧ್ಯಕ್ಷರಾದ ಅಂಬರೀಶ್ ಮಾತನಾಡಿ, ಹಳ್ಳಿಕಾರ್ ತಳಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಂಟೆಂಟ್ ಕ್ರಿಯೆಟರ್ ಮತ್ತು ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳುವಂತೆ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಆಗ್ರಹಿಸಿದರು.
ಎರಡು ಕೊಂಬುಗಳ ನಡುವೆ ಸುಳಿ ಇರುವ ಮಾಲೀಕನ ಮನೆಯಲ್ಲಿ ಅಶಾಂತಿ ಇರುವುದಾಗಿ ಹೇಳಿದ್ದಾರೆ ಮತ್ತು ಇಂತಹ ಹಸುಗಳನ್ನು ಸಾಕುವುದಿಲ್ಲ ಎಂದಿದ್ದಾರೆ. ಹಾಗಾದರೆ ಹಾಗೆ ಹೇಳಿದವರು ಕೌಟುಂಬಿಕವಾಗಿ ಸಂತೋಷವಾಗಿ ಇದ್ದಾರಾ ಎಂದು ಪ್ರಶ್ನಿಸಿದರು.
ಹಸುಗಳ ಮೈಮೇಲಿರುವ ಸುಳಿಗಳು ಪ್ರಕೃತಿ ಸಹಜವಾಗಿ ಬರುತ್ತವೆಯೇ ಹೊರತು, ಇದರಿಂದ ಹಸುಗಳ ಮಾಲೀಕರ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಸುಳಿಗಳಿಂದ ಶುಭ ಮತ್ತು ಅಶುಭವಾಗುತ್ತದೆ ಎಂಬುದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇದೊಂದು ದಲ್ಲಾಳಿಗಳ ಕುತಂತ್ರದ ಭಾಗವಷ್ಟೇ, ಸುಳಿಗಳ ಬಗ್ಗೆ ಅಪಪ್ರಚಾರ ಮಾಡುವುದರಿಂದ 1 ಲಕ್ಷ ಬೆಲೆ ಬಾಳುವ ಹಸುಗಳು 60 ಸಾವಿರಕ್ಕೆ ಮಾರಾಟವಾಗುತ್ತವೆ. ಇದರ ಪರಿಣಾಮ ಹಳ್ಳಿಕಾರ್ ಸಾಕುವ ರೈತನ ಮೇಲೆ ಬೀಳಲಿದೆ. ಮುಂದಿನ ದಿನಗಳಲ್ಲಿ ಹಳ್ಳಿಕಾರ್ ತಳಿಗಳನ್ನು ಸಾಕುವುದನ್ನು ರೈತರು ನಿಲ್ಲಿಸಿ ಬಿಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.