ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಊಹಾಪೋಹ ಹರಡಲಾಗುತ್ತಿದೆ. ಆದರೆ, ಬಿಜೆಪಿ ಟಿಕೆಟ್ ಈ ಬಾರಿಯೂ ನನಗೆ ಸಿಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿ ಬಂದಾಗ ನನ್ನ ಜೊತೆ ಯಾರೂ ಇರಲಿಲ್ಲ. ಪತ್ರಕರ್ತನಾಗಿ ಬಂದ ನನ್ನನ್ನು ಮೈಸೂರು, ಕೊಡಗಿನ ಜನರು ಎರಡು ಬಾರಿ ಗೆಲ್ಲಿಸಿದರು. ಈಗ ನನ್ನ ಜೊತೆ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಕೈ ಹಿಡಿಯಲಿವೆ. ಪ್ರಧಾನಿ ನರೇಂದ್ರ ಮೋದಿಯವರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಪಕ್ಷದ ವರಿಷ್ಠ ನಾಯಕರ ಆಶೀರ್ವಾದವಿದೆ ಎಂದರು.
ಬಿಜೆಪಿ-ಜೆಡಿಎಸ್ ನಡುವೆ ಟಿಕೆಟ್ ಹಂಚಿಕೆ ಮಾತುಕತೆ ಯಾವಾಗ ಅಂತ್ಯಗೊಳ್ಳಲಿದೆ ಎಂದು ಗೊತ್ತಿಲ್ಲ. ಈ ಬಗ್ಗೆ ಪಕ್ಷದ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿರುವ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ತಿಳಿಸಿದರು.
ಬಿಎಸ್ವೈ ಹುಟ್ಟುಹಬ್ಬ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ 82ನೇ ಜನ್ಮ ದಿನವನ್ನು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಆಚರಿಸಲಾಯಿತು. ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಇದ್ದರು. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ, ಯಡಿಯೂರಪ್ಪರನ್ನು ಕೊಂಡಾಡಿದರು.
ಇದನ್ನೂ ಓದಿ: 82ನೇ ವಸಂತಕ್ಕೆ ಕಾಲಿಟ್ಟ ಬಿ.ಎಸ್. ಯಡಿಯೂರಪ್ಪ: ಅಮಿತ್ ಶಾ ಸೇರಿ ಪಕ್ಷದ ನಾಯಕರಿಂದ ಶುಭಾಶಯ