ಬೆಂಗಳೂರು: ತಮ್ಮ ಮೇಲೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದ ಆರೋಪ ಮಾಡಿದ್ದರ ವಿರುದ್ಧ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಕೋಟ ಶ್ರೀನಿವಾಸ್ ಪೂಜಾರಿಗೆ ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಸುರೇಶ್ ಕುಮಾರ್, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಶಾಂತಾರಾಮ್ ಬುದ್ನಿ ಸಾಥ್ ನೀಡಿದರು.
''ನನ್ನ ಮೇಲಿನ ಆರೋಪ ಹಿಂಪಡೆಯಿರಿ, ಇಲ್ಲವೇ ಸಿಬಿಐ ತನಿಖೆಗೆ ಕೊಡಿ'' ಎಂದು ಆಗ್ರಹಿಸಿ ಶ್ರೀನಿವಾಸ್ ಪೂಜಾರಿ ಧರಣಿ ನಡೆಸಿದರು. ಭಿತ್ತಿ ಪತ್ರ ಪ್ರದರ್ಶನದ ಮೂಲಕ ಮೌನವಾಗಿ ಪ್ರತಿಭಟಿಸಿದರು. ಈ ಹಿಂದೆ ಕೋಟಾ ಶ್ರೀನಿವಾಸ್ ಪೂಜಾರಿ ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿದ್ದಾಗ ಬೋವಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಆರೋಪಿಸಿದ್ದರು.
ಇದೇ ವೇಳೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ''ಸದನದಲ್ಲಿ ಮಾತನಾಡುತ್ತಾ ನನ್ನ ಮೇಲೆ ಸಿಎಂ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಹಿಂದೆ ನಾನು ನಿರ್ವಹಿಸಿದ ಇಲಾಖೆಗಳಲ್ಲಿ ಒಂದು ರೂಪಾಯಿ ಭ್ರಷ್ಟಾಚಾರವೂ ಮಾಡಿಲ್ಲ. ನನ್ನ ಮೇಲೆ ಅನುಮಾನ ಇದ್ದರೆ, ಸಿಬಿಐ ತನಿಖೆಗೆ ಆದೇಶ ಮಾಡಿ ಎಂದು ಪತ್ರ ಬರೆದಿದ್ದೆ. ನಿಮ್ಮ ಅಧಿಕಾರಿಗಳೇ ನನ್ನ ಮೇಲಿನ ಭ್ರಷ್ಟಾಚಾರ ಸಾಬೀತುಪಡಿಸಿದರೆ ನಾನು ಕ್ಷಮೆಗೆ ಸಿದ್ಧ ಎಂದಿದ್ದೇನೆ'' ಎಂದರು.
''ಸದನದ ಒಳಗೆ ನಾನು ಸಮರ್ಥನೆ ಮಾಡಿಕೊಳ್ಳಲು ಅವಕಾಶ ಇಲ್ಲ. ಅದಕ್ಕಾಗಿ ಗಾಂಧಿ ಪ್ರತಿಮೆ ಎದುರು ಹಿರಿಯರ ಜೊತೆ ಧರಣಿ ಮಾಡಿದ್ದೇನೆ. ಸಿಎಂ ನನ್ನ ಮೇಲೆ ಭ್ರಷ್ಟಾಚಾರದ ಆರೋಪ ವಾಪಸ್ ಪಡೆಯುವ ವಿಶ್ವಾಸದಲ್ಲಿದ್ದೇನೆ. ಇಲ್ಲವಾದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ಬಗ್ಗೆಯೂ ಯೋಚನೆ ಮಾಡುತ್ತೇನೆ'' ಎಂದು ಸಂಸದರು ತಿಳಿಸಿದರು.
ಇದನ್ನೂ ಓದಿ: ಮುಡಾ ಹಗರಣದ ವಿಚಾರದಲ್ಲಿ ಬಿಜೆಪಿಯಿಂದ ಬ್ಲ್ಯಾಕ್ಮೇಲ್ ತಂತ್ರ: ಸಿಎಂ ಸಿದ್ದರಾಮಯ್ಯ - CM Siddaramaiah