ಬಾಗಲಕೋಟೆ: "ರಾಜ್ಯ ಸರ್ಕಾರ ರೈತರ ಜೊತೆ ಆಡುತ್ತಿರುವ ಬುಗುರಿ ಆಟ ಬಿಡಬೇಕು. ಈ ಬುಡುಬುಡಿಕೆ ಆಟ ನಡೆಯಂಗಿಲ್ಲ. ರೈತರಿಗೆ ಕೊಡಬೇಕಾಗಿರುವುದನ್ನು ಕೊಡಬೇಕು" ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯ ನವನಗರದ ಪತ್ರಿಕಾ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.
ಮುಳುಗಡೆ ಸಂತ್ರಸ್ತರ ಅನಿರ್ದಿಷ್ಟಾವಧಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸುತ್ತಾ, "ಮುಳುಗಡೆ ಸಂತ್ರಸ್ತರಿಗೆ ಹೋರಾಟ ಮಾಡಲು ಬಿಡುತ್ತೇವೆ ಎಂದರೆ ಸರ್ಕಾರಕ್ಕೆ ಇದೊಂದು ಕಪ್ಪು ಚುಕ್ಕೆ. ಯಾವುದೇ ಕಾರಣಕ್ಕೂ ರೈತರು ಬೀದಿಗೆ ಬರಲು ಬಿಡಬಾರದು" ಎಂದರು.
"ನಾವು 524.256 ಮೀಟರ್‌ಗೆ ಆಲಮಟ್ಟಿ ಅಣೆಕಟ್ಟು ಕಟ್ಟಿದ್ದೇವೆ. ನೀರು ನಿಲ್ಲಿಸಲು ತಯಾರಿದ್ದೇವೆ. ಹಿಂದೆ ಎರಡು ಗೇಟ್ ಅಳವಡಿಸಿದ್ವಿ, ಆಂಧ್ರದವರು ತಕರಾರು ಮಾಡಿ ಗೇಟ್ ಕಟ್ ಮಾಡಿಸಿದ್ದಾರೆ. ಇವತ್ತು ಸಿದ್ದರಾಮಯ್ಯ ಅವರ ಸರ್ಕಾರ ನಮಗೆ ದೊಡ್ಡ ದ್ರೋಹ ಮಾಡುತ್ತಿದೆ. ನಾವು 522 ಮೀಟರ್‌ಗೆ ನೀರು ನಿಲ್ಲಿಸುತ್ತೇವೆ ಎಂದು ನಾಳೆ ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸುತ್ತಿದ್ದಾರೆ. ಇದು ರೈತರಿಗೆ ಮಾಡುವ ದ್ರೋಹ. ಐದು ಜಿಲ್ಲೆಯ ರೈತರು ಎಚ್ಚೆತ್ತುಕೊಂಡು ಸರ್ಕಾರದ ವಿರುದ್ಧ ಬಂಡಾಯ ಏಳಬೇಕಾಗಿದೆ" ಎಂದು ಹೇಳಿದರು.
ನಮ್ಮ ಸರ್ಕಾರದ ಕಾಲದಲ್ಲಿ ಜಲಾಶಯದಲ್ಲಿ 524 ಮೀಟರ್ ಸಂಗ್ರಹವಾದಾಗ ಹಾನಿಗೊಳಗಾಗುವ ಪ್ರದೇಶಗಳಿಗೆ ಪರಿಹಾರಧನ ನೀಡಿದ್ದೇವೆ. ಆದರೆ, ಈಗ ಕಾಂಗ್ರೆಸ್ ಸರ್ಕಾರ 522 ಮೀಟರ್ ಸಂಗ್ರಹಕ್ಕೆ ಸೀಮಿತಗೊಳಿಸುತ್ತಿರುವುದು ದ್ರೋಹ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಸಿಎಂ, ಡಿಸಿಎಂ ಮತ್ತು ಅಂಬಿಕಾಪತಿ ಕಟ್ಟಿದ್ದ ಸುಳ್ಳಿನ ಮಹಲ್ ಕುಸಿದು ಬಿದ್ದಿದೆ: ಆರ್. ಅಶೋಕ್