ಶಿವಮೊಗ್ಗ: ನಾನು ಪಕ್ಷದಲ್ಲಿ ಏನನ್ನು ಕೇಳಿಲ್ಲ, ನಾನು ಸ್ವತಂತ್ರವಾದ ಹಕ್ಕಿ ಇದ್ದಂತೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಪಕ್ಷದಲ್ಲಿ ಯಾವ ಸ್ಥಾನವನ್ನು ಕೇಳಿಲ್ಲ. ನಾನು ಈಗ ಸ್ವತಂತ್ರ ಹಕ್ಕಿ. ಮೈಸೂರಿನಲ್ಲಿ ಹಳ್ಳಿ ಹಕ್ಕಿ, ನಾನು ಸ್ವತಂತ್ರ ಹಕ್ಕಿ. ದೆಹಲಿಯಲ್ಲಿ ರಾಜ್ಯದ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. 2024 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಭಾರತ ಭಾರತವಾಗಿ ಉಳಿಯಬೇಕಿದೆ ಎಂದು ತಿಳಿಸಿದರು.
ದೇಶ ವಿಭಜನೆ ಎನ್ನುವುದು ಕಾಂಗ್ರೆಸ್ ಜೀನ್ಸ್ನಲ್ಲೇ ಇದೆ: ''ಕಾಂಗ್ರೆಸ್ನವರಿಂದ ಮಾತ್ರ ಇಂಥ ದೇಶದ್ರೋಹದ ಹೇಳಿಕೆ ಬರುವುದು. ನೆಹರು ಅವರನ್ನು ಪ್ರಧಾನಿಯಾಗಿಸಲು ಅಂದು ದೇಶವನ್ನು ಒಡೆದು ಹಾಕಿದರು. ಕಾಶ್ಮೀರಕ್ಕೆ ಆರ್ಟಿಕಲ್ 370 ಕಾಯ್ದೆ ಜಾರಿಗೆ ತಂದರು. ಕಾಂಗ್ರೆಸ್ ಜೀನ್ಸ್ನಲ್ಲಿಯೇ ಮೊದಲಿನಿಂದ ಒಡೆದಾಳುವ ನೀತಿ ಇದೆ. ರಾಹುಲ್ ಗಾಂಧಿ ಭಾರತ್ ಜೋಡೋ ಎಂದು ಹೇಳಿದ್ರೆ, ಇಲ್ಲಿ ತೋಡೋ ಎಂದು ಹೇಳುತ್ತಿದ್ದಾರೆ. ಸಂಸದ ಡಿ ಕೆ ಸುರೇಶ್ ಪ್ರತಿಜ್ಞೆ ತೆಗೆದುಕೊಂಡು ಹೀಗೆ ಮಾತನಾಡಬಾರದು'' ಎಂದು ಯತ್ನಾಳ್ ಹರಿಹಾಯ್ದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ''ರಾಹುಲ್ ಗಾಂಧಿಗೆ ಏನೂ ಗೂತ್ತಿಲ್ಲ. ಅವರು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ಎಂದು ಗೂತ್ತಿಲ್ಲ. ದೇಶ ಒಡೆಯುವ ಹೇಳಿಕೆ ನೀಡಿದ್ದ ಸಂಸದ ಡಿ ಕೆ ಸುರೇಶ್ ಅವರಿಗೆ ಕಾಂಗ್ರೆಸ್ ಒಂದು ಶೋಕಾಸ್ ನೋಟಿಸ್ ನೀಡಬೇಕಿತ್ತು. ಆದರೆ ಅವರು ಡಿ ಕೆ ಸುರೇಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಂತೆ ಆಗಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
2024ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಮುಳುಗುವ ಹಡಗಿಗೆ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದರು. ಮುಂದೆ ಅಧಿಕಾರಕ್ಕೆ ಬರೋದಿಲ್ಲ ಎಂದು ಖರ್ಗೆ ಅವರು ಹೇಳುತ್ತಿದ್ದಾರೆ. ಅವರು ಮೋದಿ ಲಕ್ಕಿ ಮ್ಯಾನ್ ಎಂದು ಹೇಳಿದ್ದಾರೆ. ಕುಟುಂಬ ರಾಜಕೀಯದಿಂದ ಕಾಂಗ್ರೆಸ್ ಮುಳುಗಿ ಹೋಗಿದೆ. ಅದೇ ರೀತಿ ಪಕ್ಷವು ಸಹ ಮುಳುಗಿ ಹೋಗಿದೆ ಎಂದು ಯತ್ನಾಳ್ ಟೀಕಿಸಿದರು.
ರಾಜ್ಯ ಸರ್ಕಾರವು ಕೇಂದ್ರದಂತೆ ಶ್ವೇತ ಪತ್ರ ಹೊರಡಿಸಲಿ: ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಿದಂತೆ ರಾಜ್ಯ ಸರ್ಕಾರವು ಸಹ ಶ್ವೇತ ಪತ್ರ ಹೊರಡಿಸಬೇಕಿದೆ. ಧಾರ್ಮಿಕ ದತ್ತಿ ಇಲಾಖೆ ಆಧೀನದ ಹಿಂದೂ ದೇವಾಲಯಗಳಿಂದ ಹಣ ಪಡೆಯುತ್ತಿದೆ. ಅಲ್ಪಸಂಖ್ಯಾತರಿಗೆ ನೀಡಲು ಹಣ ಇದೆ. ಆದರೆ ರೈತರಿಗೆ ಹಣ ನೀಡಲು ಇವರ ಬಳಿ ಹಣ ಇಲ್ಲ. ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದು ನಮ್ಮ ಗುರಿ ಆಗಿದೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಮಾದಾರ ಚೆನ್ನಯ್ಯ ಸ್ವಾಮೀಜಿ ಚುನಾವಣೆ ನಿಲ್ಲುವ ಕುರಿತ ಪ್ರಶ್ನೆಗೆ ಸ್ವಾಮೀಜಿಗಳು ಚುನಾವಣೆ ಸ್ಪರ್ಧೆ ಮಾಡಬಹುದು. ಈಗ ಯೋಗಿ ಆದಿತ್ಯನಾಥ್ ರಂತೆ ಸ್ಪರ್ಧಿಸಬಹುದು ಎಂದರು.
ಮೈತ್ರಿಯಿಂದ ಜೆಡಿಎಸ್ನಲ್ಲಿ ಸಂತಸ: ಜೆಡಿಎಸ್ನವರು ಮೈತ್ರಿಯಿಂದಾಗಿ ಸಂತಸಗೊಂಡಿದ್ದಾರೆ. ಅವರಿಗೆ ಎಷ್ಟು ಸೀಟು ಬಿಟ್ಟುಕೊಡಬೇಕೆಂದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಈ ಕುರಿತು ಅಮಿತ್ ಶಾ ಅವರು ಮೈಸೂರಿಗೆ ಬಂದಾಗ ಹೇಳಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಯತ್ನಾಳ್ ಹೇಳಿದರು.
ಚುನಾವಣೆ ನಂತರ ನೋ ಗ್ಯಾರಂಟಿ, ನೋ ವಾರಂಟಿ ಆಗಲಿದೆ: ಲೋಕಸಭೆ ಚುನಾವಣೆ ನಂತರ ನೋ ಗ್ಯಾರಂಟಿ ನೋ ವಾರಂಟಿ ನೋ ಗ್ಯಾರಂಟಿ ಎಂಬಂತೆ ಆಗಲಿದೆ ಎಂದು ಟೀಕಿಸಿದರು.
ಮೀಸಲಾತಿ ಸಿಗುವವರೆಗೆ ಹೋರಾಟ ಮುಂದುವರಿಕೆ: ಇಂದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಒಬಿಸಿ ನೀಡಬೇಕೆಂದು ಹೋರಾಟ ಪ್ರಾರಂಭಿಸಿದ್ದೇವೆ. ಬಿಎಸ್ ವೈ ಹಾಗೂ ಬೊಮ್ಮಾಯಿ ಸಿಎಂ ಆಗಿದ್ದಾಗ ಸದನದಲ್ಲಿ ಸಾಕಷ್ಟು ಹೋರಾಟ ನಡೆಸಿದ್ದೆವು. ನಮ್ಮ ರಾಜ್ಯದ ಕೇಂದ್ರ ನಾಯಕರ ಸಹಕಾರದಿಂದ ಜೈನ ಸಮಾಜ, ನಮ್ಮ ಸಮಾಜ ಸೇರಿ 2D ಅಂತ ಮೀಸಲಾತಿ ನೀಡಿದ್ದರು.
ಆಂಧ್ರದ ಹೈಕೋರ್ಟ್ ತಿರಸ್ಕಾರ ಮಾಡಿದ ಮೇಲೆ ಅದನ್ನು ಸುಪ್ರೀಂ ಕೋರ್ಟ್ ಸಹ ತಿಳಿಸಿದೆ. ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಿಸಲಾಗಿದೆ. ಧಾರವಾಡ ಅಂಜುಮಾನ್ ಸಂಸ್ಥೆ ಮುಖಂಡರೊಬ್ಬರು ಸುಪ್ರೀಂಕೋರ್ಟ್ ನಲ್ಲಿ ರಿಟ್ ಹಾಕಿದ್ದಾರೆ. ಕಾಂಗ್ರೆಸ್ನವರು ಮನಸ್ಸು ಮಾಡಿದ್ರೆ ಅರ್ಜಿ ವಾಪಸ್ ಪಡೆಯಬಹುದಾಗಿತ್ತು. ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದ ಬಳಿಕ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ ಈವರೆಗೂ ಯಾವುದೇ ಸಭೆ ಕರೆದಿಲ್ಲ ಎಂದು ತಿಳಿಸಿದರು.
ನಮ್ಮ ಸಮಾಜದವರನ್ನು ರಾಜ್ಯದ ಬೇರೆ ಬೇರೆ ಕಡೆ ವಿವಿಧ ಹೆಸರಿನಿಂದ ಕರೆಯಲಾಗುತ್ತಿದೆ. ವೀರಶೈವ ಸಮಾಜದ ಉಪ ಪಂಗಡಗಳು, ಮರಾಠ ಸೇರಿ ಇತರೆ ಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ನನ್ನನ್ನು ದೆಹಲಿಗೆ ಕರೆದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ ಎಂದು ಶಾಸಕ ಯತ್ನಾಳ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾಂಗ್ರೆಸ್ ನಾಯಕರು ಪಂಚಮಸಾಲಿ ಸಮಾಜಕ್ಕೆ 2A ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಬೆಳಗಾವಿ ಅಧಿವೇಶನದಲ್ಲೂ ಚರ್ಚೆಯಾಗಲಿಲ್ಲ. ಈಗ ಬೆಂಗಳೂರು ಅಧಿವೇಶನದಲ್ಲೂ ಯಾವುದೇ ಮಾತನ್ನು ಆಡಳಿತದವರು ನೀಡುತ್ತಿಲ್ಲ. ಇದರ ಹೋರಾಟದ ಭಾಗವಾಗಿ ಸ್ವಾಮೀಜಿಗಳು ಲಿಂಗಪೂಜೆಯ ಮೂಲಕ ಹೋರಾಟ ನಡೆಸಲು ಬಂದಿದ್ದಾರೆ. ಅದರಂತೆ ನಾವು ಸಹ ಹೋರಾಟದಲ್ಲಿ ಭಾಗಿಯಾಗಲು ಬಂದಿದ್ದೇವೆ. ಸುಪ್ರೀಂ ಕೋರ್ಟ್ನಿಂದ ಅರ್ಜಿ ವಾಪಸ್ ಪಡೆದರೆ, ನಮಗೆ ಮೀಸಲಾತಿ ಸಿಗುತ್ತಿದೆ ಎಂದರು.
ಕಾಂತರಾಜ್ ವರದಿ ಅವೈಜ್ಞಾನಿಕ: ಕಾಂತರಾಜ್ ವರದಿಯನ್ನು ಅವೈಜ್ಞಾನಿಕವಾಗಿದೆ. ಅದರ ಮೂಲ ವರದಿ ಕಾಣೆಯಾಗಿದೆ. ಈಗ ಜೆರಾಕ್ಸ್ ಮಾತ್ರ ಇಟ್ಟುಕೊಂಡಿದ್ದಾರೆ. ವರದಿ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ನಮಗೆ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮಾಡುತ್ತ ಇರುತ್ತೇವೆ ಎಂದರು.
ಕಾಂತರಾಜ್ ವರದಿಯನ್ನು ಮರು ಸಮೀಕ್ಷೆ ಮಾಡಲಿ. ಲಿಂಗಾಯತರಲ್ಲಿ ಎಲ್ಲರೂ ಟಾಟಾ ಬಿರ್ಲಾ ಇಲ್ಲ. ನಮ್ಮಲ್ಲೂ ಬಡವರು ಇದ್ದಾರೆ. ಕೆಪಿಎಸ್ಸಿಯಲ್ಲಿ ಹಣ ಇದ್ದವರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ. ಕೆಪಿಎಸ್ಸಿ ನಿರ್ದೇಶಕರು ಹಣ ನೀಡಿ ಬಂದಿರುತ್ತಾರೆ. ಅವರು ಹಣ ಪಡೆಯುದೆ ಇರುವುದಿಲ್ಲ. ಮೀಸಲಾತಿ ಪಡೆದು ಬಲಾಢ್ಯರಾದವರು ಇತರರಿಗೂ ಮೀಸಲಾತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಯತ್ನಾಳ್ ಹೇಳಿದರು.
ಇದನ್ನೂಓದಿ: ವಿಧಾನಸಭೆಯಲ್ಲಿ ಸದ್ದು ಮಾಡಿದ ಕೆರಗೋಡು ಹನುಮ ಧ್ವಜ ವಿಚಾರ