ವಿಜಯಪುರ : ಗ್ಯಾರಂಟಿ ಯೋಜನೆಯಿಂದ ತಾಯಂದಿರು, ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತಂತೆ, ಅದಕ್ಕೆ ಪ್ರತಿಕ್ರಿಯಿಸಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಿಳಿಸಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಲೋಕಸಭಾ ಚುನಾವಣೆವರೆಗೆ ಮಾತ್ರ ಇರುತ್ತವೆ ಎಂದು ಹೇಳಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದಲ್ಲಿನ ಅಂಬೇಡ್ಕರ್ ವೃತ್ತದಲ್ಲಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ ನಂತರ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೂ ಚಾಲನೆ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ. ಹಲವು ನಿಯಮಗಳನ್ನು ಮಾಡಿ ಗ್ಯಾರಂಟಿ ನೀಡಿದ್ದಾರೆ. ಅದಕ್ಕಾಗಿ ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂದು ಯತ್ನಾಳ್ ಭವಿಷ್ಯ ನುಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಸ್ಟಾರ್ ಪ್ರಚಾರಕರಾಗಿರುವ ಯತ್ನಾಳ್ ಅವರು ''ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಾರಾ? ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸುತ್ತಾ, ಶಿವಮೊಗ್ಗದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ. ತಾಯಿ ಹೃದಯದ ಪೂಜ್ಯ ತಂದೆಯವರು ಇದ್ದಾರೆ. ತಾಯಿ ಹೃದಯದ ಪೂಜ್ಯ ತಂದೆಯವರ ಸಣ್ಣ ಮಗ ರಾಜ್ಯಾಧ್ಯಕ್ಷರಿದ್ದಾರೆ. ತಾಯಿ ಹೃದಯದ ಪೂಜ್ಯ ತಂದೆಯವರ ಹಿರಿಯ ಮಗ ಇದ್ದಾರೆ. ಅವರು ಮೂರು ಜನ ಇದ್ದಾಗ ನಮ್ಮದು ಏನೂ ಕೆಲಸ ಅಲ್ಲಿ'' ಎಂದು ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು.
ಇನ್ನು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕುರಿತು ಸ್ವಾಮೀಜಿಗೆ ರಹಸ್ಯಗಳನ್ನು ಬಿಚ್ಚಿಡುತ್ತೇನೆಂಬ ಮುರುಗೇಶ್ ನಿರಾಣಿ ಹೇಳಿಕೆ ವಿಚಾರವಾಗಿ ಇದೇ ವೇಳೆ ಯತ್ನಾಳ್ ಪ್ರತಿಕ್ರಿಯಿಸಿ, ಎಲ್ಲರ ರಹಸ್ಯ ಇದ್ದೇ ಇರುತ್ತದೆ ಎಂದು ನಿರಾಣಿಗೆ ಟಾಂಗ್ ನೀಡಿದರು.
''ಬಸನಗೌಡ ಪಾಟೀಲ್ ಯತ್ನಾಳ್ಗೆ ಗಂಡಸ್ಥನ ಇದ್ದರೆ, ನನ್ನ ವಿರುದ್ಧ ನಗರ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಲ್ಲಲಿ'' ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡುತ್ತ, ''ಪ್ರತಿ ಚುನಾವಣೆಯಲ್ಲಿ ಅವನು ಆಹ್ವಾನ ಕೊಡುತ್ತಾನೆ. ಆಹ್ವಾನ ಕೊಡೋದು ಅವನ ಉದ್ಯೋಗ. ಈ ಉದ್ಯೋಗ ಮಾಡಿಕೊಂಡು ಜೀವನ ಮಾಡುತ್ತಾನೆ'' ಎಂದು ಏಕವಚನದಲ್ಲೇ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಹರಿಹಾಯ್ದರು.
''ಈಗ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಮಗಳನ್ನು ನಿಲ್ಲಿಸಿದ್ಧಾನೆ. ಆ ಭಾಗಕ್ಕೆ ಇಂದು ಹೋಗುತ್ತಿದ್ದೇನೆ. ಅಲ್ಲಿ ಹೋಗಿ ಏನು ಏನು ಹೇಳಬೇಕೋ ಹೇಳುತ್ತೇನೆ. ಮುಂದಿನ ಲೋಕಸಭಾ, ವಿಧಾನಸಭಾ ಚುನಾವಣೆ ವೇಳೆ ಡಿ ಲಿಮಿಟೇಷನ್ ಆಗುತ್ತದೆ. ವಿಜಯಪುರ, ಬಾಗಲಕೋಟೆ ಮಧ್ಯೆ ಮೂರು ಲೋಕಸಭಾ ಕ್ಷೇತ್ರಗಳಾಗುತ್ತವೆ. ಆಗ ಜನರಲ್ ಆಗುತ್ತದೆ. ಶಿವಾನಂದ ಪಾಟೀಲ್ಗೆ ಗಂಡಸ್ಥನ ಇದ್ದರೆ ಚುನಾವಣೆಗೆ ನಿಲ್ಲಲಿ'' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮರುಸವಾಲು ಹಾಕಿದರು.
ಇದೇ ವೇಳೆ ಅಂಬೇಡ್ಕರ್ ಜಯಂತಿ ವೇಳೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಎರಡು ಗುಂಪುಗಳ ನಡುವಿನ ವಾಗ್ವಾದದ ಕುರಿತು, ಇಂಥದ್ದನ್ನೆಲ್ಲಾ ನಿರ್ಲಕ್ಷಿಸಬೇಕು ಎಂದು ಹೇಳಿದರು.
ಇದನ್ನೂ ಓದಿ : ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ - HD Kumaraswamy