ಶಿರಸಿ (ಉತ್ತರ ಕನ್ನಡ): ''ನಾನು ಮತ್ತು ಸೋಮಶೇಖರ್ ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷದಲ್ಲೂ ಇಲ್ಲ. ನಮ್ಮದು ಕರ್ನಾಟಕ ಶಾಸಕಾಂಗ ಪಕ್ಷ. ನನ್ನ ರಾಜೀನಾಮೆ ಕೇಳುವ ಹಕ್ಕು ಬಿಜೆಪಿಗೆ ಇಲ್ಲ. ಬೇಕಿದ್ದಲ್ಲಿ ಉಚ್ಚಾಟನೆ ಮಾಡಲಿ'' ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ವರದಾ ನದಿಯಿಂದ ನಿರ್ಮಾಣವಾದ ಪ್ರವಾಹವನ್ನು ಇಂದು ಗಮನಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಈ ಹಿಂದೆ ರಾಜೀನಾಮೆ ಕೊಟ್ಟೇ ಚುನಾವಣೆ ಎದುರಿಸಿ ಬಂದವನು. ರಾಜೀನಾಮೆ ಬಗ್ಗೆ ಬೇರೆಯವರ ಉಪದೇಶ ಬೇಕಿಲ್ಲ. ಆಗ ನಾನು ರಾಜೀನಾಮೆ ಕೊಟ್ಟು ಬಂದಾಗ ಕಾಂಗ್ರೆಸ್ಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿಗೆ ಎನಿಸಲಿಲ್ಲವೇ? ಅಧಿಕಾರಕ್ಕೆ ಬರೋವಾಗ ಏನು ಅನ್ಸಿಲ್ವಾ ಬಿಜೆಪಿಗೆ ? ಈಗ್ಯಾಕೆ ಹೀಗೆ ಅನ್ಸುತ್ತೆ? ಎಂದು ಪ್ರಶ್ನಿಸಿದರು.
ಅವಶ್ಯಕತೆ ಬಿದ್ದಾಗ ಮತ್ತೆ ರಾಜೀನಾಮೆ ಕೊಡುತ್ತೇನೆ. ಅದಕ್ಕೂ ನಾನು ಹೆದರಲ್ಲ. ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ. ಆದರೆ ನಾವೇನು ಉಚ್ಚಾಟನೆ ಮಾಡೋದು ಬೇಡ ಅಂತಾ ಅರ್ಜಿ ಕೊಟ್ಟಿದ್ದೀವಾ? ನಮ್ಮ ನಡುವಳಿಕೆ ಅವರಿಗೆ ಸಮಾಧಾನ ಇಲ್ಲ ಎಂದರೆ ಅವರೇ ತೀರ್ಮಾನ ಮಾಡುತ್ತಾರೆ. ಇಂಥದ್ದೇ ನಿರ್ಣಯ ತೆಗೆದುಕೊಳ್ಳಿ ಅನ್ನೋಕೆ ನಾನ್ಯಾರು?. ಸರ್ಕಾರ ಬರಲು ಕಾರಣರಾದವರು, ಸ್ಪೀಕರ್ ಆಗಲು ಕಾರಣರಾದವರು ಯಾರೂ ಬಿಜೆಪಿಗೆ ಕಾಣುತ್ತಿಲ್ಲ. ಎಲ್ಲ ಆಗಿ ಆಯ್ತು, ಅನುಭವಿಸಿ ಆಯ್ತು. ದೋಣಿ ದಾಟಿದ ಮೇಲೆ ದೋಣಿಗಾರನ ಅವಶ್ಯಕತೆ ಇಲ್ಲ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸನ ಸಭೆಯಲ್ಲಿ ಬಿಜೆಪಿಯವರಿಗೆ ನನ್ನ ಜೊತೆ ಗುರುತಿಸಿಕೊಳ್ಳಲು ಮುಜುಗರ ಆದರೆ ಅದು ಅವರಿಗೆ ಬಿಟ್ಟದ್ದು. ನನ್ನನ್ನು ಯಾವುದೇ ಪ್ರತಿಭಟನೆಗೆ ಕರೆದಿಲ್ಲ. ನಾನು ಮತ್ತು ಸೋಮಶೇಖರ್ ಬಿಎಲ್ಪಿಗೂ ಹೋಗ್ತಿಲ್ಲ. ಸಿಎಲ್ಪಿಗೂ ಹೋಗ್ತಿಲ್ಲ. ನಮ್ದು ಕೆಎಲ್ಪಿ, ಕರ್ನಾಟಕ ಲೆಜೆಸ್ಲೇಟಿವ್ ಪಾರ್ಟಿ ಎಂದರು.
ಇದನ್ನೂ ಓದಿ: ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳಿಗೆ ಜೀವಕಳೆ: ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ಹೀಗಿದೆ - Water Level
ಬಂಡವಾಳ ಇಲ್ಲದ ಮನುಷ್ಯ ನಾನಲ್ಲ. ಏನೇನಾಗಿದೆ ಅನ್ನೋದೆಲ್ಲವನ್ನು ಬಿಚ್ಚಿಡುತ್ತೇನೆ. ಎಲ್ಲ ಬಂಡವಾಳ ನನ್ನ ಹತ್ತಿರವಿದೆ. ಬಂಡವಾಳ ಖಾಲಿ ಆಗಿ ಬಂದವ ನಾನಲ್ಲ. ನಾನೇನು ಕಳವು ಮಾಡಿಲ್ಲ, ದರೋಡೆ ಮಾಡಿಲ್ಲ. ಏನಾದರೂ ಮಾಡಿದ್ರೆ ಬೇಕಲ್ಲ, ಇಡಿ ಏನು ಇವರಪ್ಪನ ಮನೆ ಆಸ್ತಿ ಅಲ್ಲ. ಯಾರನ್ನೋ ತಂದು ಬೆಳಗ್ಗೆ ಒಳಗೆ ಹಾಕಿಸುತ್ತೀನಿ ಅನ್ನೋರಿಗೆ ಏನು ಮಾಡಲು ಆಗುತ್ತೆ?. ಒಂದು ತಿಂಗಳು ಒಳಗಡೆ ಹಾಕಿಸಬಹುದು ಅಷ್ಟೇ. ಸಾರ್ವಜನಿಕ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕಾಗುತ್ತದೆ. ಎದುರಿಸೋಕೆ ಆಗದಿದ್ರೆ ಉಳಿಯಬಾರದು ಎಂದು ಬಿಜೆಪಿ ತೊರೆದಲ್ಲಿ ಇಡಿ ದಾಳಿ ನಡೆಯಬಹುದು ಎಂಬ ಟೀಕೆಯ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಜೀಂ ಪ್ರೇಮ್ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ 6ದಿನ ಪೌಷ್ಠಿಕ ಆಹಾರ - CM To Visit Ankola
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಿಂದ ಟೀಕೆ ಹಿನ್ನೆಲೆಯಲ್ಲಿ ಮಾತನಾಡಿ, ಸಂಸದರಾದ ಮೇಲೆ ಹೆಚ್ಚು ಟೀಕೆ ಮಾಡಲೇಬೇಕಲ್ವಾ ?. ಸಂಸದನಾಗಿದ್ದೇನೆ ಎಂದು ಗೊತ್ತಾಗೋದು ಹೇಗೆ? ಟೀಕೆ ಮಾಡೇ ಮಾಡುತ್ತಾರೆ. ಬೇಡ ಅಂದವರು ಯಾರು?. ಉತ್ತರ ಕೊಡೋ ದಿನ ಬಂದಾಗ ಕೊಡುತ್ತೇನೆ. ಆದರೆ ಈ ದಿನ, ಉತ್ತರ ಕೊಡೋದು ಸರಿಯಲ್ಲ ಎಂದ ಹೆಬ್ಬಾರ್, ಉತ್ತರ ಕನ್ನಡ ಕ್ಷೇತ್ರಕ್ಕೆ ಮೋದಿ ಅಭ್ಯರ್ಥಿ, ಹಾಗಾಗಿ ಗೆಲ್ಲಿಸಿ ಅಂತಾ ಹೇಳಿದ್ದು. ಎಲ್ಲ ಪ್ರಚಾರದಲ್ಲೂ ಕೂಡ ಹೀಗೆ ಹೇಳಿದ್ರು. ಅಭ್ಯರ್ಥಿ ನಾನಲ್ಲ, ದೇಶಕ್ಕಾಗಿ ಮೋದಿಗಾಗಿ ಮತ ಕೊಡಿ ಅಂತ ಹೇಳಿದ್ದರು. ಗೆದ್ದೋರು ಮೋದಿ, ಅಭ್ಯರ್ಥಿ ಅಪ್ರಸ್ತುತ ಅಂತ ಆಯ್ತಲ್ವಾ. ಆದರೆ ನಾನು ನನ್ನ ಹೆಸರಿನಲ್ಲಿ ಚುನಾವಣೆ ಗೆದ್ದಿದ್ದೇನೆ ಎಂದು ಟಾಂಗ್ ಕೊಟ್ಟರು.