ಬೆಂಗಳೂರು: ಪ್ರಮುಖ ನಗರಗಳ ನಡುವೆ ಬಸ್ ಸಂಚಾರ ಒದಗಿಸುವ ಜರ್ಮನಿ ಮೂಲದ 'ಫ್ಲಿಕ್ಸ್‌ಬಸ್'ಗೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಂಗಳವಾರ ಹಸಿರು ನಿಶಾನೆ ತೋರಿದ್ದಾರೆ. ಇದರೊಂದಿಗೆ, ಫ್ಲಿಕ್ಸ್‌ಬಸ್ ಸೇವೆ ದಕ್ಷಿಣ ಭಾರತಕ್ಕೆ ಪದಾರ್ಪಣೆ ಮಾಡಿದೆ.
ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್‌ಬಸ್ ಸೇವೆ ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಸಚಿವ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ಬಸ್ ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನ್ನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸ ಗಳಿಸುವ ಗುರಿ ಹೊಂದಿದೆ ಎಂದರು.
Happy to launch @FlixBus in Bengaluru today, marking the start of their service in South India! With operations in 40+ countries, they are set to enhance public transport options and connectivity. Proud to flag off these buses, driving sustainable and efficient travel across the… pic.twitter.com/JFwqemluxd
— M B Patil (@MBPatil) September 3, 2024
ಬಸ್ ಸಂಚಾರದಲ್ಲಿ ಭಾರತ ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆ. ಪರಿಸರಸ್ನೇಹಿ ಇಂಧನಗಳ ಬಳಕೆಗೆ ಒತ್ತು ನೀಡಿ ದೇಶದಲ್ಲಿ ಸುಸ್ಥಿರ ಸಂಚಾರಕ್ಕೆ ಕೊಡುಗೆ ನೀಡಲು ಸಂಸ್ಥೆಯು ಆದ್ಯತೆ ನೀಡಬೇಕೆಂದು ಸಚಿವರು ಸಲಹೆ ನೀಡಿದರು.
ಬಸ್‌ನ ವಿಶೇಷತೆಗಳೇನು?: ಕೈಗೆಟುಕುವ ದರ, ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣ. ಹವಾನಿಯಂತ್ರಣ, ಪವರ್ ಔಟ್ಲೆಟ್ಗಳು, ಹೆಚ್ಚುವರಿ ಲೆಗ್ರೂಮ್ ಮತ್ತು ಶೌಚಾಲಯಗಳನ್ನು ಒಳಗೊಂಡಂತೆ ವಿವಿಧ ಸೌಕರ್ಯಗಳನ್ನು ಫ್ಲಿಕ್ಸ್‌ಬಸ್ ಹೊಂದಿದೆ.
ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್‌ಬಸ್ ಸಹ-ಸಂಸ್ಥಾಪಕ ಡೇನಿಯಲ್ ಕ್ರೌಸ್, ಫ್ಲಿಕ್ಸ್‌ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಈ ವೇಳೆ ಉಪಸ್ಥಿತರಿದ್ದರು.