ಬೆಂಗಳೂರು: ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟು ಕೊಡ್ತಾರಾ? ಕೇಳಿ. ನಾನೇ ಸ್ವಾಮೀಜಿ ಆಗ್ತೇನೆ ಎಂದು ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ನಾಳೆಯಿಂದ ನಾನೇ ಕಾವಿ ಬಟ್ಟೆ ಹಾಕಿಕೊಳ್ಳುತ್ತೇನೆ. ಅವರು ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾ ಕೇಳಿ?. ಅವರು ಬಿಟ್ಟುಕೊಡಲ್ಲ, ಇವರು ಬಿಟ್ಟು ಕೊಡಲ್ಲ. ಸ್ವಾಮೀಜಿ ಯಾವ ಉದ್ದೇಶದಿಂದ ಹೇಳಿದ್ದಾರೆ ಗೊತ್ತಿಲ್ಲ. ಅವರು ಸದುದ್ದೇಶದಿಂದ ಹೇಳಿದ್ದಾರೋ, ದುರುದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ ಎಂದು ಹೇಳಿದರು.
ಸ್ವಾಮೀಜಿ ಹೇಳಿಕೆ ಸರಿ, ತಪ್ಪು ಅಂತ ನಾನು ವ್ಯಾಖ್ಯಾನ ಮಾಡೋಕೆ ಹೋಗಲ್ಲ. ದೇಶದಲ್ಲಿ ಎಲ್ಲಾದರೂ ಇದೆಯಾ?. ಅಧಿಕಾರ ಬಿಟ್ಟು ಬಾರಪ್ಪ ಇನ್ನೊಬ್ಬ ಅಧಿಕಾರ ನಡೆಸ್ತಾರೆ ಅಂತ. ಆ ರೀತಿ ಉದಾಹರಣೆ ದೇಶದಲ್ಲಿ ಇದೆಯಾ?. ಹಾಗೆ ನೋಡಿದ್ರೆ ಸೋನಿಯಾ ಗಾಂಧಿ ಒಬ್ಬರೇ. ನನಗೆ ಪ್ರಧಾನಮಂತ್ರಿ ಹುದ್ದೆ ಬೇಡ ಅಂದವರು. ಬೇರೆಯವರಿಗೆ ಬಿಟ್ಟು ಕೊಟ್ಟಿರುವ ಇತಿಹಾಸ ಇಲ್ಲ. ಸಿಎಂ ಸ್ಥಾನ ಖಾಲಿ ಇಲ್ಲ. ಈಗ ಡಿಸಿಎಂ ಸ್ಥಾನ ಖಾಲಿ ಇದೆ, ಅದನ್ನು ಭರ್ತಿ ಮಾಡಲಿ ಎಂದು ಸಚಿವ ರಾಜಣ್ಣ ತಿರುಗೇಟು ನೀಡಿದರು.
ಮುಂದಿನ 10 ವರ್ಷ ಸಿದ್ದರಾಮಯ್ಯರೇ ಸಿಎಂ: ಯಾರು ಬಿಟ್ಟು ಕೊಡುವುದಕ್ಕೆ ಹೋಗ್ತಾರೆ. ಅವರು ಕೇಳಿದ ತಕ್ಷಣ ಬಿಟ್ಟುಕೊಡುವುದಕ್ಕೆ ಆಗುತ್ತಾ?. ಸಿದ್ದರಾಮಯ್ಯ ಬರೀ 5 ವರ್ಷ ಅಲ್ಲ, 10 ವರ್ಷ ಅವರೇ ಸಿಎಂ. ನಾನು ಡಿಸಿಎಂ ಆಕಾಂಕ್ಷಿಯಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದು ರಾಜಣ್ಣ ಇದೇ ಸಂದರ್ಭದಲ್ಲಿ.
ಡಿಕೆಶಿ ಹೇಳಿದಂತೆ ನಡೆದುಕೊಳ್ಳಬೇಕಂತೇನಿಲ್ಲ: ಡಿಸಿಎಂ ಬಗ್ಗೆ ಮಾಧ್ಯಮದ ಮುಂದೆ ಹೇಳಿದ್ರೆ ಪ್ರಚಾರ ಅಷ್ಟೇ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಯ್ತು ಪ್ರಚಾರಕ್ಕೆ ಅಂತ ಅವರು ಅಂದುಕೊಳ್ಳಲಿ. ಡಿಕೆಶಿ ಹೇಳಿದಂತೆ ನಡೆದುಕೊಳ್ಳಬೇಕು ಅಂತ ನನಗೆ ಇಲ್ಲ. ನನಗೆ ಸ್ವಂತ ಬುದ್ಧಿ ಇದೆ. ನನಗೆ ಅನಿಸಿದಂತೆ ನಾನು ನಡೆದುಕೊಳ್ಳುತ್ತೇನೆ. ಪ್ರಚಾರಕ್ಕೆ ಅಂತಾನೇ ಅವರು ಹೇಳಿಕೊಳ್ಳಲಿ ಬಿಡಿ. ನಾನೇನು ಆ ರೀತಿ ನಡ್ಕೊಂಡಿಲ್ಲ. ಮೀಡಿಯಾದವರು ಬಂದಿದ್ದೀರಿ ನಾನು ಮಾತನಾಡಿದ್ದೇನೆ. ಅದನ್ನು ಸರಿ ತಪ್ಪು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ ಎಂದರು.
ಹೆಚ್ಚುವರಿ ಡಿಸಿಎಂ ನೇಮಕ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಆಯ್ಕೆ ವೇಳೆ ಕೆ.ಸಿ.ವೇಣುಗೋಪಾಲ್ ಏನು ಹೇಳಿದ್ದರು?. ಅದನ್ನು ನೆನಪು ಮಾಡಿದ್ದೇನೆ ಅಷ್ಟೇ ಎಂದರು.
ಇದನ್ನೂ ಓದಿ: ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ಚಂದ್ರಶೇಖರ್ ಸ್ವಾಮೀಜಿ ಹೇಳಿಕೆಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ? - CM Siddaramaiah
ಇಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮೈಸೂರು ರಸ್ತೆಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರು ಮಾತನಾಡುತ್ತಾ, ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದರು. ಸಿಎಂ, ಡಿಸಿಎಂ ಸಮ್ಮುಖದಲ್ಲಿ ವೇದಿಕೆಯಲ್ಲೇ ಸ್ವಾಮೀಜಿ ಮಾತನಾಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.