ಬೆಂಗಳೂರು/ಬೆಳಗಾವಿ ಸುವರ್ಣ ವಿಧಾನಸೌಧ: ರಾಜ್ಯದಲ್ಲಿರುವ 25 ಲಕ್ಷ ಎಪಿಎಲ್ ಕಾರ್ಡುದಾರರ ಪೈಕಿ ಕೇವಲ 1 ಲಕ್ಷ ಮಂದಿ ಮಾತ್ರವೇ ಪಡಿತರ ಪಡೆಯುತ್ತಿದ್ದಾರೆ. ಕೇಂದ್ರದ ಆದೇಶದ ಮೇರೆಗೆ ಹೊಸದಾಗಿ ಎಪಿಎಲ್ ಕಾರ್ಡುಗಳನ್ನು ವಿತರಿಸುವುದನ್ನು ನಿಲ್ಲಿಸಲಾಗಿದೆ. ಬಿಪಿಎಲ್ ಕಾರ್ಡುದಾರರ ಪಟ್ಟಿಯಲ್ಲಿ ಶೇ.20ರಷ್ಟು ಅನರ್ಹರಿದ್ದಾರೆ. ಅವರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಬಿಪಿಎಲ್, ಎಪಿಎಲ್ ಸೇರಿದಂತೆ ಒಟ್ಟು 5.29 ಕೋಟಿ ಕಾರ್ಡುದಾರರಿದ್ದಾರೆ. ವಾರ್ಷಿಕ 1.20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಬಿಪಿಎಲ್ ಕಾರ್ಡುದಾರರ ಪಟ್ಟಿಯಲ್ಲಿ ಶೇ.20ರಷ್ಟು ಮಂದಿ ಅನರ್ಹರಿದ್ದಾರೆ. ಇವರನ್ನು ಎಪಿಎಲ್ ಕಾರ್ಡುದಾರರಾಗಿ ಪರಿಷ್ಕರಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗಿರುವುದು ನಿಜ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಓರ್ವ ಕಾರ್ಡುದಾರರಿಗೂ ಅನ್ಯಾಯ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಾಯತ್ ಹಾಗೂ ಗ್ರಾಮ ಮಟ್ಟದಲ್ಲಿ ಈ ಬಗ್ಗೆ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜೆಡಿಎಸ್ ಸದಸ್ಯ ಕೆ.ಇ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಅಕ್ರಮ ಪಡಿತರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಆರೋಪ ಸಾಬೀತಾದಲ್ಲಿ ನ್ಯಾಯಾಲಯದ ಆದೇಶದಂತೆ ಕಾನೂನು ಕ್ರಮ ವಹಿಸಲಾಗುವುದು. 2021ರಿಂದ 2023ರ ಮೇ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಂದ 13.51 ಕೋಟಿ ರೂ ದಂಡ ವಿಧಿಸಲಾಗಿದೆ.
2024ನೇ ಸಾಲಿನಲ್ಲಿ 213 ಎಫ್ಐಆರ್ ದಾಖಲಿಸಿ ಒಟ್ಟು 2.68 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಪರಿಶೀಲಿಸಲು, ಮೇಲ್ವಿಚಾರಣೆ ಮಾಡಲು ಇಲಾಖಾ ವತಿಯಿಂದ ವಿಭಾಗವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಜಿಎಸ್ಟಿ ಪಾವತಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ 13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ, 3.63 ಲಕ್ಷ ಕಾರ್ಡ್ ರದ್ದು: ಸಚಿವ ಮುನಿಯಪ್ಪ