ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆಗೆ ಶನಿವಾರ ದಿಢೀರ್ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಾರ್ವಜನಿಕರಿಂದ ದೂರು ದಾಖಲಾಗಿ ಹಲವು ದಿನ ಕಳೆದರೂ ಸಮಸ್ಯೆ ಪರಿಹರಿಸದ ಆರೋಗ್ಯ ನಿರೀಕ್ಷಕನನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದರು.
ಜಿಲ್ಲಾ ಕುರುಬರ ಸಂಘದ ಸಮುದಾಯ ಭವನದ ಶಂಕುಸ್ಥಾಪನೆಗೆ ಬಂದಿದ್ದ ಬೈರತಿ ಸುರೇಶ್, ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದರು. ಪಾಲಿಕೆ ಆವರಣದಲ್ಲಿನ ಸಹಾಯವಾಣಿ ಕೇಂದ್ರಕ್ಕೆ ತೆರಳಿದ ಅವರು, ಅಲ್ಲಿನ ರಿಜಿಸ್ಟರ್ ಪರಿಶೀಲಿಸಿದರು. ನಂತರ ಸ್ವತಃ ತಾವೇ ದೂರುದಾರರಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ಪರಿಹಾರವಾಗಿದೆಯೇ ಎಂದು ಪ್ರಶ್ನಿಸಿದರು.
ಪಾಲಿಕೆ ವ್ಯಾಪ್ತಿಯ ಆದರ್ಶ ನಗರದ ತಮ್ಮ ಮನೆಯ ಬಳಿ ಚರಂಡಿಯಲ್ಲಿ ಕಸ ಕಟ್ಟಿಕೊಂಡಿದೆ. ದೂರು ನೀಡಿ ಹಲವು ದಿನ ಕಳೆದರೂ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಈ ವೇಳೆ ಅಲವತ್ತುಕೊಂಡರು. ಇದರಿಂದ ಆಕ್ರೋಶಗೊಂಡ ಸಚಿವ ಬೈರತಿ ಸುರೇಶ್, ಆ ಭಾಗದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಅವರನ್ನು ತಕ್ಷಣ ಸಸ್ಪೆಂಡ್ ಮಾಡಿ ಆದೇಶ ಪ್ರತಿಯನ್ನು ನನಗೆ ವಾಟ್ಸ್ಆ್ಯಪ್ ಮಾಡಿ ಎಂದು ಅಲ್ಲಿಯೇ ಇದ್ದ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಅವರಿಗೆ ಸೂಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಬೈರತಿ ಸುರೇಶ್, ಸಾಕಷ್ಟು ದೂರು ಬಂದ ಕಾರಣ ಇಂದು ನಾನು ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿದ್ದೇನೆ. ಸಾರ್ವಜನಿಕರ ಸಮಸ್ಯೆ ಆಲಿಸಿದ್ದೇನೆ. ಸಮಸ್ಯೆ ಪರಿಹರಿಸದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದರು.
ಪಾಲಿಕೆ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ವಾರ್ಡ್ ವಿಂಗಡಣೆ ಮಾಡಲಾಗುತ್ತದೆ. ನಂತರ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.