ಚಿಕ್ಕಮಗಳೂರು: ಬೇಟೆಗೆ ತೆರಳಿದ್ದಾಗ ಬಂದೂಕಿನಿಂದ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬನ ಎದೆಗೆ ಗುಂಡು ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯನ್ನು ಸಂಜಯ್ (35) ಎಂದು ಗುರುತಿಸಲಾಗಿದೆ.
ಮೃತ ಸಂಜಯ್ ಕೆರಮಕ್ಕಿ ಗ್ರಾಮದವನಾಗಿದ್ದು, ಸ್ನೇಹಿತರಾದ ನಿಸರ್ಗ ಮತ್ತು ಸುಮನ್ ಎಂಬವರ ಜೊತೆ ಕಾಡು ಹಂದಿಯ ಶಿಕಾರಿಗೆ ತೆರಳಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಪೊಲಿಸರು ನಿಸರ್ಗ ಮತ್ತು ಸುಮನ್ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚುನಾವಣೆ ಹಿನ್ನೆಲೆ ಬಂದೂಕನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು ಎಂಬ ನಿಯಮವಿದೆ. ಆದರೂ ಯುವಕರು ನಿಯಮವನ್ನು ಗಾಳಿಗೆ ತೂರಿ ಬಂದೂಕನ್ನು ಇಟ್ಟುಕೊಂಡಿದ್ದರು. ಅಲ್ಲದೇ ಅಕ್ರಮವಾಗಿ ಶಿಕಾರಿಗೆ ತೆರಳಿದ್ದರು. ಘಟನೆ ನಡೆದ ತಕ್ಷಣ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಬಿದ್ದು ನಿಸರ್ಗ ಎಂಬಾತನ ಕೈ ಮೂಳೆ ಮುರಿದಿದೆ.
ಘಟನೆ ಬಗ್ಗೆ ಸ್ಥಳೀಯರು, ಇದು ಮಿಸ್ ಫೈರ್ ಅಥವಾ ಉದ್ದೇಶ ಪೂರ್ವಕ ಕೊಲೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ; ಕೊಲೆ ಆರೋಪಿಗೆ ಗುಂಡೇಟು - Police Opened Fire