ವಿಜಯಪುರ : ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ವಿದ್ಯುತ್‌ತಂತಿ ಸ್ಪರ್ಶಿಸಿ ಮೃತಪಟ್ಟ ವ್ಯಕ್ತಿಯನ್ನು ಹುಸೇನಬಾಷಾ ಎಂದು ಗುರುತಿಸಲಾಗಿದೆ. ಮೂಕಿಹಾಳ ಗ್ರಾಮದ ಹೊರವಲಯದಿಂದ ಶಿವಪೂರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ದುರ್ಘಟನೆ ನಡೆದಿದೆ. ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ಎರಡು ಕುರಿ ಸಾವು ; ಓರ್ವ ಗಾಯ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹಾಲಿಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಕುರಿಗಳು ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಾಯಗೊಂಡ ಘಟನೆ ನಡೆದಿದೆ.
ಸಾಬಣ್ಣ ಬಸನಗೌಡ ಬಿರಾದಾರ ಎಂಬುವವರ ಕುರಿಗಳು ಸಾವನ್ನಪ್ಪಿವೆ. ಇನ್ನು ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಸಿಡಿಲು ಬಡಿದು ಶಿವಸಂಗಪ್ಪ ರಾಯಪ್ಪ ಬೇವಿನಮಟ್ಟಿ ಎನ್ನುವವರು ಗಾಯಗೊಂಡಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಲಬಾಧೆ ತಾಳದೇ ಮಹಿಳೆ ಆತ್ಮಹತ್ಯೆ : ಸಾಲಬಾಧೆ ತಾಳಲಾರದೇ ರೈತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ರೈತ ಮಹಿಳೆಯನ್ನು ರುಕ್ಮವ್ವ ದುಂಡಪ್ಪ ಬಾಡಗಿ ಎಂದು ಗುರುತಿಸಲಾಗಿದೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ರುಕ್ಮವ್ವ 10 ಲಕ್ಷ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ಜಮೀನು ಹೊಂದಿದ್ದಾರೆ. ಗದ್ಯಾಳ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕಿನಲ್ಲಿ 1 ಲಕ್ಷ, ವಿಜಯಪುರ ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ 2.5 ಲಕ್ಷ, ಬಬಲೇಶ್ವರದ ಚೈತನ್ಯ ಫೈನಾನ್ಸ್ನಲ್ಲಿ 50 ಸಾವಿರ ಮತ್ತು ಕೈಗಡವಾಗಿ 6 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸರ್ಕಾರ ಕುಟುಂಬದ ಸದಸ್ಯರಿಗೆ ಪರಿಹಾರ ಕೊಡಲಿ ಎಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : ಹಲ್ದಿ ಸಮಾರಂಭದಲ್ಲಿ ವಿದ್ಯುತ್ ಸ್ಪರ್ಶಿಸಿ ವರ ಸಾವು; ಸಂಭ್ರಮದ ಮದುವೆಯಲ್ಲಿ ಸೂತಕ - Groom Electrocuted