ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ನಡೆದ ಒಂಟಿ ಮಹಿಳೆ ಹತ್ಯೆ ಪ್ರಕರಣದ ಆರೋಪಿಯ ಆತ್ಮಹತ್ಯೆಗೆ ಶರಣಾಗಿರುವುದು ತನಿಖಾಧಿಕಾರಿಗಳ ಮುಂದಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ.
ಪ್ರಕರಣದ ಆರೋಪಿಯಾಗಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿಯ ಭೀಕರ ಹತ್ಯೆಗೆ ಕಾರಣವೇನು? ಆರೋಪಿ ಹತ್ಯೆಗೈದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಸಿಗುವ ಮುನ್ನವೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮದುವೆಯಾಗುವಂತೆ ಮುಕ್ತಿ ರಂಜನ್‌ನನ್ನು ಮಹಾಲಕ್ಷ್ಮಿ ಒತ್ತಾಯಿಸುತ್ತಿದ್ದಳು. ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೂ ಸಹ ಬೇರೆ ಸಹೋದ್ಯೋಗಿ ಯುವತಿಯರು ಮುಕ್ತಿರಂಜನ್ ಜೊತೆ ಮಾತನಾಡುವುದನ್ನು ಮಹಾಲಕ್ಷ್ಮಿ ಸಹಿಸುತ್ತಿರಲಿಲ್ಲ. ಮುಕ್ತಿರಂಜನ್ ಸಹ ಸ್ವತಃ ಹಠಮಾರಿ ಸ್ವಭಾವದವನಾಗಿದ್ದ ಎಂಬುದು ಇದುವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ ಹತ್ಯೆಗೆ ನಿಖರ ಕಾರಣವೇನು ಎನ್ನುವುದು ಇನ್ನೂ ಸಹ ಅಸ್ಪಷ್ಟವಾಗಿದೆ. ಅಲ್ಲದೆ ಮನೆಯಲ್ಲಿ ರಕ್ತ ಎಲ್ಲಿಯೂ ಸಹ ಸಿಡಿಯದಂತೆ ಮೃತದೇಹ ಕತ್ತರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಹತ್ಯೆಗೈದು ಮೃತದೇಹದ ರಕ್ತ ಹರಿದ ನಂತರ ಕತ್ತರಿಸಲಾಗಿತ್ತಾ ಅಥವಾ ಆರೋಪಿಯ ಕೃತ್ಯಕ್ಕೆ ಬೇರೆ ಯಾರಾದರೂ ಸಾಥ್ ನೀಡಿದ್ದರಾ? ಹತ್ಯೆಗೈದು ಇಷ್ಟು ದಿನ ಆರೋಪಿ ತಲೆಮರೆಸಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆಗೆ ಶರಣಾಗಿರುವುದರಿಂದ ಅನೇಕ ಪ್ರಶ್ನೆಗಳು ಹಾಗೆ ಉಳಿದಿವೆ ಎಂದರು.
ಸದ್ಯ ಆರೋಪಿಯ ಕುಟುಂಬಸ್ಥರಿಂದ ಮಾಹಿತಿ ಪಡೆಯಲಾಗುತ್ತಿದೆ. ಈಗಾಗಲೇ ರಾಜ್ಯ ಪೊಲೀಸರ ಎರಡು ತಂಡಗಳು ಒಡಿಶಾದಲ್ಲಿರುವುದರಿಂದ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಒಡಿಶಾ ಎಸ್ಪಿ ಹೇಳಿಕೆ: ಭದ್ರಕ್ ಎಸ್ಪಿ ವರುಣ್ ಗುಂಟುಪಲ್ಲಿ ಆರೋಪಿ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆ ಹೀಗಿದೆ. "ವೈಯಾಲಿಕಾವಲ್‌ನಲ್ಲಿ ನಡೆದ ಒಂಟಿ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗಾಗಿ ಬೆಂಗಳೂರಿನಿಂದ ಪೊಲೀಸ್ ತಂಡ ಬಂದಿದೆ. ಹತ್ಯೆಯ ಪ್ರಾಥಮಿಕ ಆರೋಪಿ ಒಡಿಶಾದ ಭದ್ರಕ್ ಜಿಲ್ಲೆಯಲ್ಲಿದ್ದ ಮಾಹಿತಿ ಮೇರೆಗೆ ಆತನನ್ನು ಬಂಧಿಸುವ ಸಲುವಾಗಿ ಬಂದಿದ್ದರು. ಆದರೆ ಅವನ ಬಂಧನಕ್ಕೂ ಮುನ್ನ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಬಗ್ಗೆ ಈಗಾಗಲೇ ಮೃತನ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯಾದ ಬಳಿಕ ಆರೋಪಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ನಾವು ಬೆಂಗಳೂರು ಪೊಲೀಸ್ ತಂಡಕ್ಕೆ ಮಾಹಿತಿ ನೀಡಿದ್ದು ಅವರ ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದ್ದೇವೆ. ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿಯ ಬಳಿ ಲ್ಯಾಪ್ಟಾಪ್ ದೊರಕಿಲ್ಲ. ಆದರೆ ಡೆತ್ನೋಟ್ ಒಂದು ಪುಸ್ತಕದಲ್ಲಿ ಬರೆದಿದ್ದು ಸಿಕ್ಕಿದೆ. ಡೆತ್ ನೋಟ್ನಲ್ಲಿ 'ನಾನೇ ಮಹಾಲಕ್ಷ್ಮಿಯ ಹತ್ಯೆ ಮಾಡಿರುವುದಾಗಿ' ತಿಳಿಸಿದ್ದಾನೆ. ಹಾಗೇ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಒಂದು ಬ್ಯಾಗ್ ಮತ್ತು ಸ್ಕೂಟರ್ ದೊರಕಿದ್ದು ಅದನ್ನು ವಶಪಡಿಸಿಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.