ದಾವಣಗೆರೆ : ಹಾಲಿ ಸಂಸದ ಜಿ ಎಂ ಸಿದ್ದೇಶ್ವರ್ ಕುಟುಂಬಕ್ಕೆ ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್ ಫಿಕ್ಸ್ ಆಗುತ್ತೆ ಎಂದು ಖುದ್ದು ಸಂಸದರೇ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ನಮ್ಮ ಕುಟುಂಬಕ್ಕೆ ಸಿಕ್ಕೇ ಸಿಗುತ್ತೆ ಎಂದು ಖಾತ್ರಿಪಡಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ ಎಂ ಸಿದ್ದೇಶ್ವರ್ ಸ್ಟೋಟಕ ಹೇಳಿಕೆ ನೀಡಿದ್ದಾರೆ. ಭಾರತ್ ಅಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಅಕ್ಕಿ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ಯಾರೇ ಏನೇ ಲಾಬಿ ಮಾಡಿದರೂ ದೆಹಲಿಯಲ್ಲಿ ಹೋಗಿ ಕೂತರು ತೊಂದರೆ ಇಲ್ಲ. ಬಿಜೆಪಿ ಟಿಕೆಟ್ ಪಕ್ಕಾ ನಮ್ಮ ಕುಟುಂಬಕ್ಕೆ ಸಿಗುತ್ತೆ. ನನಗೆ ಕೊಡ್ಬೇಡಿ ಎಂದು ಚರ್ಚೆ ನಡೆಯುತ್ತಿದೆ. ಆದರೂ ನಮಗೆ ಟಿಕೆಟ್ ಸಿಗಲಿದೆ. ನಾನಾದ್ರು ನಿಲ್ಲಬಹುದು, ಇಲ್ಲಾ ನಮ್ಮ ಮಗ, ಇಲ್ಲ ತಮ್ಮ ನಿಲ್ಲಬಹುದು. ಬಿಜೆಪಿಯಿಂದ ಯಾರಿಗಾದರೂ ಟಿಕೆಟ್ ಕೊಟ್ರು ಕೆಲಸ ಮಾಡುವೆ. ನನಗೆ ಜನ ಬೆಂಬಲ ಇದೆ ಎಂದರು.
ಸಂಸದರೇ ಬೇಕು ಈ ಚುನಾವಣೆಗೆ ಎಂದು ಜನಪಟ್ಟು ಹಿಡಿದಿರುವ ವಾತವರಣ ಇದೆ. ಎಲ್ಲ ಸರ್ವೇಗಳಲ್ಲೂ ನನ್ನ ಹೆಸರು ಮುಂದೆ ಇದೆ. ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಅಮಿತಾ ಶಾ ಅವರು ಭರವಸೆ ನೀಡಿದ್ದಾರೆ. ಇನ್ನೆರಡು ದಿನ ಕಾದು ನೋಡಿ ಟಿಕೆಟ್ ಪಕ್ಕಾ ಎಂದು ಅಚ್ಚರಿಯ ಹೇಳಿಕೆ ನೀಡಿ ಟಿಕೆಟ್ ನಮಗೆ ಪಕ್ಕಾ ಎನ್ನುವ ಮೂಲಕ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಟೀಮ್ಗೆ ಟಕ್ಕರ್ ನೀಡಿದರು.
2019 ರಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದಿದ್ದ ಸಂಸದ...! 2019ರ ಲೋಕಸಭಾ ಚುನಾವಣೆಯಲ್ಲಿ ನಾನು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಅವರು ಹೇಳಿದ್ದರು. ಆದರೆ ಇದೀಗ ನನಗೆ ಇಲ್ಲ ನಮ್ಮ ಮನೆಗೆ ಟಿಕೆಟ್ ಬರಲಿದೆ ಎಂದು ಅಚ್ಚರಿಯ ಹೇಳಿಕೆ ನೀಡ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಂಸದರು ತಯಾರಿ ಮಾಡ್ತಿದ್ದಾರೆ. ಅವರ ಪುತ್ರ ಜಿ ಎಂ ಅನಿತ್ ಅವರಿಗೆ ಟಿಕೆಟ್ ಕೊಡಿಸಲು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ. ಇನ್ನು ಇತ್ತ ರೇಣುಕಾಚಾರ್ಯ ಟೀಂ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಿ ಎಂದು ಪಟ್ಟುಹಿಡಿದಿದೆ. ಈ ಬಾರಿ ಯಾರಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಸಿಗುತ್ತೆ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಸಂಸದ ಜಿ.ಎಂ ಸಿದ್ದೇಶ್ವರ್ಗೆ ಟಿಕೆಟ್ ನೀಡಬೇಡಿ: ಬಿಎಸ್ವೈ, ವಿಜಯೇಂದ್ರಗೆ ಮನವಿ ಸಲ್ಲಿಸಿದ ದಾವಣಗೆರೆ ಬಿಜೆಪಿ ನಿಯೋಗ