ವಿಜಯಪುರ: ವ್ಯಕ್ತಿಯೊಬ್ಬ ಶಾಲೆಗೆ ತನ್ನನ್ನೆ ಎಸ್ ಡಿಎಂಸಿ ಅಧ್ಯಕ್ಷನನ್ನಾಗಿ ಮಾಡುವಂತೆ ಒತ್ತಾಯಿಸಿ ಶಾಲೆಯ ಗೇಟ್ಗೆ ಬೀಗ ಜಡಿದ ಘಟನೆ ತಾಳಿಕೋಟಿ ತಾಲೂಕಿನ ಬಳಗಾನೂರ ಕ್ರಾಸ್ ಬಳಿ ನಡೆದಿದೆ.
ರಾಮನಗೌಡ ದೋರನಹಳ್ಳಿ ಶಾಲೆಗೆ ಬೀಗ ಜಡಿದವರು. 2009 ರಲ್ಲಿ ರಾಮನಗೌಡ ತಂದೆ ಹನುಮಂತಗೌಡ ಅವರು ಶಾಲೆ ಕಟ್ಟಡಕ್ಕಾಗಿ ಸುಮಾರು 5 ಗುಂಟೆ ಜಾಗವನ್ನು ದಾನ ರೂಪದಲ್ಲಿ ಕೊಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ರಾಮನಗೌಡ ಅವರೇ ಎಸ್ಡಿಎಂಸಿ ಅಧ್ಯಕ್ಷರಾಗಿದ್ದರು. ಆದರೆ ಈ ಬಾರಿ ಬೇರೊಬ್ಬರಿಗೆ ಎಸ್ಡಿಎಂಸಿ ಅಧ್ಯಕ್ಷರನ್ನಾಗಿ ಮಾಡಿದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ರಾಮನಗೌಡ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಹಾಗೂ ಶಾಲೆಯ ಶಿಕ್ಷರನ್ನು ಹೊರ ಹಾಕಿದ್ದಾರೆ.
ಒಟ್ಟು ಒಂದರಿಂದ ಐದನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ 23 ಮಕ್ಕಳು ಓದುತ್ತಿದ್ದಾರೆ. ಸರ್ಕಾರದ ಹೊಸ ನಿಯಮದ ಅನ್ವಯ ಶಾಲೆಯಲ್ಲಿ ಯಾವ ಪೋಷಕರ ಮಕ್ಕಳಿರುತ್ತವೆ ಅವರಿಗೆ ಎಸ್ಡಿಎಂಸಿ ಸದಸ್ಯ ಸೇರಿದಂತೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಆದರೆ ರಾಮನಗೌಡನ ಮಕ್ಕಳು ಯಾರೂ ಈ ಶಾಲೆಯಲ್ಲಿ ಓದದೇ ಇರುವ ಕಾರಣ ಅವರನ್ನು ಈ ಬಾರಿ ಬದಲಾವಣೆ ಮಾಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ರಾಮನಗೌಡ ಶಾಲೆಗೆ ಬೀಗ ಹಾಕಿ ನಿರಂತರವಾಗಿ ತನ್ನನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಷಯ ತಿಳಿದ ಬಿಇಒ ಸ್ಥಳಕ್ಕೆ ಭೇಟಿ ನೀಡಿ, ಮಧ್ಯಾಹ್ನದ ಬಳಿಕ ಹಿರಿಯರ ಸಮಕ್ಷಮದಲ್ಲಿ ಮುಂಬರುವ ದಿನಗಳಲ್ಲಿ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ರಾಮನಗೌಡರನ್ನು ಒಪ್ಪಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುವುಸು ಬೇಡಾ ಎಂದು ಶಾಲೆಯ ಬೀಗ ತಗೆಸಿದ್ದಾರೆ.
ಬಳಿಕ ರಾಮನಗೌಡ ಶಾಲೆಯ ಬೀಗ ತಗೆದಿದ್ದಾರೆ. ಜಮೀನು ಕೊಡುವಾಗ ನಮ್ಮ ಕುಟುಂಬದವರನ್ನೇ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದ್ದರು, ಈಗ ಮಾಡದಿದ್ದರೆ ಮತ್ತೆ ಬೀಗ ಹಾಕುವುದಾಗಿ ರಾಮನಗೌಡ ಹೇಳಿದ್ದಾರೆ.