ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ತ್ವರಿತ ನ್ಯಾಯ ಸುಲಭಗೊಳಿಸಲು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕು ಎಂದು ಮಂಗಳೂರು ಬಾರ್ ಅಸೋಸಿಯೇಷನ್ ವಕೀಲರು ಒತ್ತಾಯಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಸಂಘಟನೆಯ ಅಧ್ಯಕ್ಷ ಎಚ್. ವಿ. ರಾಘವೇಂದ್ರ ಹೇಳಿದ್ದಾರೆ.
"ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಈ ಭಾಗಗಳ ಶೇ 30 ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರು ಹೈಕೋರ್ಟ್‌ನಲ್ಲಿ ಬಾಕಿಯಿದ್ದು, ಇದು ಜನರ ಸಮಯ ಮತ್ತು ಹಣದ ವ್ಯಯವನ್ನು ಹೆಚ್ಚಿಸುತ್ತದೆ. ಮಂಗಳೂರಿನಿಂದ ಬೆಂಗಳೂರು 360 ಕಿಲೋಮೀಟರ್ ದೂರದಲ್ಲಿದ್ದು, ಈ ಅಂತರದ ಪ್ರಯಾಣ ಜನರ ಮೇಲೆ ಹೆಚ್ಚಿನ ಹೊರೆ ತಂದಿದೆ" ಎಂದು ಅವರು ತಿಳಿಸಿದ್ದಾರೆ.
"ಮಂಗಳೂರು ಕೇವಲ ಕರಾವಳಿ ಭಾಗದ ಕೇಂದ್ರವಲ್ಲ, ಇದು ಉತ್ತಮ ಸಾರಿಗೆ ವ್ಯವಸ್ಥೆ, ವಿಮಾನ ನಿಲ್ದಾಣ ಮತ್ತು ರೈಲು ಸಂಪರ್ಕವನ್ನು ಹೊಂದಿರುವ ಪ್ರದೇಶ. ಈ ಭಾಗದಲ್ಲಿ ಶೈಕ್ಷಣಿಕ, ಕೈಗಾರಿಕಾ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿದೆ. ಮಂಗಳೂರಿನಲ್ಲಿಯೇ 5 ಕಾನೂನು ಕಾಲೇಜುಗಳು ಇವೆ. ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಕಾನೂನು ಕಾಲೇಜುಗಳಿವೆ. ಹೀಗಾಗಿ, ಮಂಗಳೂರು ಹೈಕೋರ್ಟ್ ಪೀಠ ಸ್ಥಾಪನೆಗೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಕೇಸ್ಗಳ ಡಿಸೆಂಟ್ರಲೈಜೇಶನ್ ಮೂಲಕ ಜನರಿಗೆ ನ್ಯಾಯ ಸಿಗಲು ಸಹಕರಿಸಬೇಕು" ಎಂದು ಎಚ್. ವಿ. ರಾಘವೇಂದ್ರ ಹೇಳಿದರು.
ಕ್ಯಾಂಪೇನ್ ಮತ್ತು ಹೋರಾಟ: "ನಾವು ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ತರುವ ಹೋರಾಟವನ್ನು ಆರಂಭಿಸಿದ್ದೇವೆ. ವಕೀಲರ ಸಂಘ ಡಿಸೆಂಬರ್ 13 ರಿಂದ 15ರವರೆಗೆ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿ, ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಜನರ ಬೆಂಬಲವನ್ನು ಹೊಂದಿಸಲು ಮುಂದಾಗಿದೆ. ಈ ವೇಳೆ 'ಪೋಸ್ಟ್ ಕಾರ್ಡ್ ಅಭಿಯಾನ' ಸಹ ಆಯೋಜನೆಗೊಂಡಿದ್ದು, ಇದು ಜನರ ಗಮನ ಸೆಳೆಯಲು ಸಹಾಯಕವಾಗಲಿದೆ" ಎಂದರು.
ಇದನ್ನೂ ಓದಿ: ಮದರಸಾದಲ್ಲಿ ಶಿಕ್ಷಕರಿಂದ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಕೇಸ್ ರದ್ದತಿಗೆ ಹೈಕೋರ್ಟ್ ನಿರಾಕರಣೆ