Good Sleep Tips: ಬಹುತೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ನಿದ್ರೆಯ ವಿಚಾರದಲ್ಲಿ ತುಂಬಾ ತೊಂದರೆಗಳನ್ನೂ ಎದುರಿಸುತ್ತಾರೆ. ಆದರೆ, ಗರ್ಭಿಣಿಯರಿಗೆ ಈ ಸಮಸ್ಯೆ ಇನ್ನಷ್ಟು ಹೆಚ್ಚು. ಕೆಲವು ತಿಂಗಳುಗಳ ಕಾಲ ನಿದ್ರಾಹೀನತೆ ಹೀಗೆಯೇ ಮುಂದುವರೆಯುತ್ತದೆ.
ಹೊಟ್ಟೆ ಬೆಳೆಯುತ್ತಿರುವ ಕಾರಣದಿಂದಾಗಿ ಬೇಗ ಸುಸ್ತಾಗುವುದೂ ಸೇರಿದಂತೆ ವಿವಿಧ ಅನಾನುಕೂಲತೆಯನ್ನು ಅನುಭವಿಸುತ್ತಾರೆ. ಇದರಿಂದ ಸರಿಯಾಗಿ ನಿದ್ರಿಸಲು ಸಾಧ್ಯವಾಗದು. ಆದರೆ, ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ನಿದ್ರಾಹೀನತೆ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು ಎನ್ನುವುದು ತಜ್ಞರ ಸಲಹೆ.
ನಿದ್ರೆಗೆ ಸಮಯ ಹೊಂದಿಸಿ: ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದರಿಂದ ನಿದ್ದೆ ಬರುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ, ಮಲಗುವ ಮುನ್ನ ಟಿವಿ, ಮೊಬೈಲ್ ಫೋನ್, ಕಂಪ್ಯೂಟರ್ ಸೇರಿದಂತೆ ವಿವಿಧ ಗ್ಯಾಜೆಟ್‌ಗಳ ಬಳಕೆ ಮಾಡುವುದನ್ನು ನಿಲ್ಲಿಸಿ. ಸಾಧ್ಯವಾದರೆ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು, ಬೆಚ್ಚಗಿನ ಹಾಲು ಕುಡಿಯುವುದರಿಂದ ಉತ್ತಮ ನಿದ್ದೆ ಬರುತ್ತದೆ.
ಲಘು ವ್ಯಾಯಾಮ ಮಾಡಿ: ಕೆಲವರಿಗೆ ಗರ್ಭಧಾರಣೆ ಕನ್ಫರ್ಮ್ ಆದ ನಂತರ ಅವರು ಯಾವುದೇ ಕೆಲಸ ಮಾಡದೆ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಇದು ಸರಿಯಲ್ಲ ಎನ್ನುತ್ತಾರೆ ವೈದ್ಯರು. ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೈದ್ಯರು ಸಲಹೆ ನೀಡದ ಹೊರತು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಲಘು ವ್ಯಾಯಾಮ ಮಾಡುವುದರಿಂದ ತಾಯಿ ಹಾಗೂ ಮಗುವಿಗೆ ಅನುಕೂಲವಾಗುತ್ತದೆ. ಇದರ ಪರಿಣಾಮವಾಗಿ ಅವರು ದಿನವಿಡೀ ಉತ್ಸುಕರಾಗಿರುತ್ತಾರೆ. ರಾತ್ರಿಯಲ್ಲಿ ಆರಾಮವಾಗಿ ನಿದ್ರಿಸುತ್ತಾರೆ. ರಾತ್ರಿ ಮಲಗುವ ಮುನ್ನ ವೈದ್ಯರು ಸೂಚಿಸಿದ ಸಮಯಕ್ಕೆ ವ್ಯಾಯಾಮ ಮಾಡುವಂತೆಯೂ ವೈದ್ಯರು ಸೂಚಿಸುತ್ತಾರೆ.
ಒತ್ತಡದಿಂದ ಮುಕ್ತವಾಗಿರಿ: ನಮ್ಮ ದೈನಂದಿನ ಜೀವನದಲ್ಲಿ ನಾವು ಎದುರಿಸುವ ಒತ್ತಡ ಮತ್ತು ಆತಂಕ ಕೂಡಾ ರಾತ್ರಿ ಸಮಯದಲ್ಲಿ ನಮಗೆ ನಿದ್ರೆ ಬಾರದಿರಲು ಕಾರಣವಾಗುತ್ತದೆ. ಅದರಲ್ಲೂ ಮನೆ ಹಾಗೂ ಕಚೇರಿಯಲ್ಲಿನ ಅನೇಕ ಸಮಸ್ಯೆಗಳು, ಹೆರಿಗೆಯ ಕುರಿತಾದ ಭಯಗಳು ನಿದ್ರಾಹೀನತೆಗೆ ಕಾರಣವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಇದು ನಿಮಗೆ ಹಾಗೂ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಒಳ್ಳೆಯದಲ್ಲ. ಹಾಗಾಗಿ ಹೆಚ್ಚು ಆಲೋಚಿಸದೆ ಆರಾಮವಾಗಿ ಮತ್ತು ಒತ್ತಡದಿಂದ ಮುಕ್ತರಾಗಿ ನಿದ್ದೆ ಮಾಡಬೇಕಾಗುತ್ತದೆ. ಅಲ್ಲದೇ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ತಲೆ, ಕಾಲುಗಳನ್ನು ಮೃದುವಾಗಿ ಮಸಾಜ್ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದ ನರಗಳು ಉತ್ತೇಜಿತಗೊಂಡು ಆರಾಮವಾಗಿ ನಿದ್ರೆ ಸಹಕಾರಿಯಾಗುತ್ತದೆ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ.
ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.