ಆಗ್ರಾ(ಉತ್ತರ ಪ್ರದೇಶ): ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಕದ್ದಿದ್ದಾನೆ ಎಂಬ ಅನುಮಾನದ ಹಿನ್ನೆಲೆಯಲ್ಲಿ 10 ವರ್ಷದ ಬಾಲಕನನ್ನು ಒತ್ತೆಯಾಳಾಗಿರಿಸಿದ ಆರೋಪಿಗಳು, ಮೂರು ದಿನಗಳ ಕಾಲ ಚಿತ್ರಹಿಂಸೆ ನೀಡಿರುವ ಘಟನೆ ಆಗ್ರಾದ ತಾಜ್ ನಗರಿಯಲ್ಲಿ ನಡೆದಿದೆ.
ಬಾಲಕನಿಗೆ ಅನ್ನ, ನೀರು ಕೊಡದೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕರೆಂಟ್ ಶಾಕ್ ಕೂಡ ನೀಡಿದ್ದಾರೆ ಎಂಬುದು ಪೋಷಕರ ಆರೋಪ. ಈ ಬಗ್ಗೆ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಚಿತ್ರಹಿಂಸೆ ನೀಡಿರುವುದು ಗೊತ್ತಾಗಿದೆ.
ತನ್ನ ಪುತ್ರ, ಸಂಬಂಧಿಕರ ಮದುವೆಗೆಂದು ಸೋದರ ಸಂಬಂಧಿಯೊಂದಿಗೆ ತೆರಳಿದ್ದ. ಮದುವೆ ಮಗಿಸಿ ಮನೆಗೆ ಬಂದಿದ್ದಾನೆ. ಮರುದಿನ ವ್ಯಕ್ತಿಯೊಬ್ಬರು ಆತ ಚಿನ್ನಾಭರಣ ಕದ್ದಿದ್ದಾನೆ ಎಂದು ಮಗನನ್ನು ಕರೆದುಕೊಂಡು ಹೋದರು. ನಂತರ ಒತ್ತೆಯಾಳಾಗಿರಿಸಿಕೊಂಡ ಮಾಹಿತಿ ತಿಳಿಯಿತು. ತಕ್ಷಣ ಸ್ಥಳಕ್ಕೆ ತೆರಳಿ ಮಗನನ್ನು ಬಿಡಿಸಿಕೊಂಡು ಬಂದೆ ಎಂದು ಬಾಲಕನ ತಂದೆ ದೂರು ನೀಡಿದ್ದಾರೆ. ಎರಡೂ ಕಡೆಯಿಂದಲೂ ದೂರು ದಾಖಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಖಂಡೌಲಿ ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಕುಮಾರ್ ಚೌಹಾಣ್ ತಿಳಿಸಿದರು.
ಆರೋಪಿ ಸಂಬಂಧಿಕರು ಘಟನೆ ನಡೆದು ಏಳು ದಿನಗಳ ಬಳಿಕ ಬುಧವಾರ ಚಿನ್ನಾಭರಣ ಕಳ್ಳತನದ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯ ಡಿಸಿಪಿ ಸೋನಮ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿಸಿದ ಆರೋಪ; 6 ಮಂದಿ ಸೆರೆ - Dalit Youth Assaulted