ಹೈದರಾಬಾದ್: ವೆಸ್ಟ್ ಇಂಡೀಸ್ ಲೆಜೆಂಡರಿ ಬೌಲರ್ ಆ್ಯಂಡಿ ರಾಬರ್ಟ್ಸ್ ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರ ಗುಣಗಾನ ಮಾಡಿದ್ದಾರೆ. ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಹೆಚ್ಚಿನ ವಿಕೆಟ್ ಪಡೆದಿದ್ದರೂ ಶಮಿ ಅವರೇ ಟಾಪ್ ಬೌಲರ್ ಎಂದಿದ್ದಾರೆ.
ಶಮಿ ಅವರಿಗೆ ಬೌಲಿಂಗ್ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತದೆ. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವೂ ಅವರಿಗಿದೆ. ಹಾಗಾಗಿ, ಸದ್ಯ ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಬೌಲರ್ ಎಂದು ಹೊಗಳಿದ್ದಾರೆ.
ಶಮಿ ಕೆಲವು ಸಮಯದಿಂದ ಅತ್ಯುತ್ತಮ ಬೌಲರ್ ಆಗಿ ಪ್ರದರ್ಶನ ತೋರುತ್ತಿದ್ದಾರೆ. ಬುಮ್ರಾ ಅವರಷ್ಟು ವಿಕೆಟ್‌ಗಳನ್ನು ಪಡೆಯದಿರಬಹುದು. ಆದರೆ, ಟೀಂ ಇಂಡಿಯಾದ ಟಾಪ್ ಕ್ಲಾಸ್ ಬೌಲರ್. ತಂಡದ ಉಳಿದ ಆಟಗಾರರಿಗಿಂತ ಹೆಚ್ಚು ಸ್ಥಿರತೆ ಹೊಂದಿದ್ದಾರೆ. ಅವರು ಚೆಂಡನ್ನು ಸ್ವಿಂಗ್ ಮಾಡಬಹುದು ಮತ್ತು ಸೀಮ್ ಮಾಡಬಹುದು. ಅಲ್ಲದೆ, ಬುಮ್ರಾ ಅವರಿಗಿಂತಲೂ ಚೆಂಡನ್ನು ನಿಯಂತ್ರಿಸುವ ಸಾಮರ್ಥ್ಯವಿದೆ ಎಂದು ರಾಬರ್ಟ್ಸ್ ವಿಶ್ಲೇಷಿಸಿದ್ದಾರೆ.
ರಾಬರ್ಟ್ಸ್ 1974-83ರ ನಡುವೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ತಮ್ಮ 9 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 47 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 25.21 ಸರಾಸರಿಯಲ್ಲಿ 202 ವಿಕೆಟ್‌ಗಳನ್ನು ಪಡೆದಿದ್ದಾರೆ.
ಶಮಿ ಟೀಂ ಇಂಡಿಯಾಗೆ ಮರಳಲು ಶ್ರಮಿಸುತ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡು ತಂಡದಿಂದ ದೂರ ಉಳಿದಿದ್ದರು.
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಬಿಸಿಸಿಐ ಆಯ್ಕೆ ಸಮಿತಿ ಶಮಿ ಫಿಟ್ನೆಸ್ ಪರೀಕ್ಷೆ ನಡೆಸುತ್ತಿದೆ. ಎಷ್ಟು ಬೇಗ ಫಿಟ್ ಆಗುತ್ತಾರೋ ಅಷ್ಟು ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರುಪ್ರವೇಶ ಮಾಡುವ ಸಾಧ್ಯತೆ ಇದೆ.
ಶಮಿ ತಮ್ಮ ಫಾರ್ಮ್ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದು, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ನಿನ್ನೆಯಷ್ಟೇ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚಂಡೀಗಢ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ್ದರು. ಬ್ಯಾಟಿಂಗ್ನಲ್ಲಿ 17 ಎಸೆತಗಳಲ್ಲಿ 32 ರನ್ ಪೇರಿಸಿದ್ದರು. ಕೊನೆಯ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದ ಶಮಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 19 ರನ್ ಗಳಿಸಿದ್ದರು. ಇದರೊಂದಿಗೆ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಉರುಳಿಸಿದ್ದರು.
ಇದನ್ನೂ ಓದಿ: ಈ ಮೂರು ಕೆಲಸ ಮಾಡಿದ್ರೆ ಆಸ್ಟ್ರೇಲಿಯಾ ವಿರುದ್ಧ ಗೆಲುವು ಖಚಿತ: ಭಾರತಕ್ಕೆ ದಿಗ್ಗಜ ಕ್ರಿಕೆಟರ್ ಟಿಪ್ಸ್