ನವದೆಹಲಿ: ನಾಮನಿರ್ದೇಶಿತ ದೆಹಲಿ ಸಿಎಂ ರೇಖಾ ಗುಪ್ತಾ ತಮ್ಮನ್ನು ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಸ್ಪರ್ಶಿ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಪ್ರಧಾನಿ ಮೋದಿ ಅವರ ನಿರೀಕ್ಷೆಗಳಿಗೆ ಬದ್ಧನಾಗಿರುತ್ತೇನೆ (I will stand up to his expectations) ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಶಾಲಿಮಾರ್ ಬಾಗ್ ಕ್ಷೇತ್ರದಿಂದ ಚುನಾಯಿತಗೊಂಡು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಶಾಸಕಿ ರೇಖಾ ಗುಪ್ತಾ ಅವರನ್ನು ನಿನ್ನೆ ದೆಹಲಿಯ ಸಿಎಂ ಆಗಿ ಘೋಷಿಸಲಾಯಿತು. ಇಂದು ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೇಖಾ ಗುಪ್ತಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ರೇಖಾ ಗುಪ್ತಾ ಅವರು ಬಿಜೆಪಿಯಿಂದ 2ನೇ ಹಾಗೂ ದೆಹಲಿ ಸಿಎಂ ಇತಿಹಾಸದಲ್ಲಿ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ನನ್ನ ಕಥೆ ಪ್ರತಿಯೊಬ್ಬ ಮಹಿಳೆಗೂ ಸ್ಪೂರ್ತಿ: ಈ ಹಿನ್ನೆಲೆ ಗೆಲುವಿನ ಮಾತನಾಡಿರುವ ರೇಖಾ ಅವರು, "ನನ್ನಂತಹ ಸಾಮಾನ್ಯ ಕಾರ್ಯಕರ್ತೆ ಮತ್ತು ಮಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಪಾರ ನಂಬಿಕೆ ಇಟ್ಟಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನಿಲ್ಲುತ್ತೇನೆ. ನನ್ನಂತಹ ಶ್ರೀಸಾಮಾನ್ಯನ ಮೇಲೆ ಅಪಾರ ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿಯನ್ನು ನನ್ನ ಮೇಲೆ ಇಟ್ಟಿರುವ ಪಕ್ಷದ ನಾಯಕತ್ವಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕಥೆ ಪ್ರತಿಯೊಬ್ಬ ಮಹಿಳೆಗೂ ಸ್ಪೂರ್ತಿಯಾಗಬಲ್ಲದು, ಸಾಮಾನ್ಯ ಮಧ್ಯಮ ವರ್ಗದ ಮಹಿಳೆಯೂ ಪಕ್ಷದ ಉನ್ನತ ನಾಯಕತ್ವವನ್ನು ತಲುಪಲು ಇದು ಅವಕಾಶವನ್ನು ನೀಡಬಹುದು" ಎಂದು ತಮ್ಮ ಶಾಲಿಮಾರ್ ಬಾಗ್ ನಿವಾಸವನ್ನು ತಲುಪಿದ ನಂತರ ಅವರು ಹೇಳಿದ್ದಾರೆ.
ದೆಹಲಿಗೆ ಸುವರ್ಣಯುಗ: ಇದಕ್ಕೂ ಮುನ್ನ ತನ್ನನ್ನು ಬೆಂಬಲಿಸಿದ ಮತ್ತು ಆಯ್ಕೆ ಮಾಡಿದ್ದಕ್ಕಾಗಿ ದೆಹಲಿಯ ಜನರಿಗೆ ಧನ್ಯವಾದ ಸಮರ್ಪಿಸಿದ ಅವರು ದೆಹಲಿಗೆ ಸುವರ್ಣಯುಗ ಬರಲಿದೆ ಎಂದಿದ್ದಾರೆ.
"ನನ್ನನ್ನು ಬೆಂಬಲಿಸಿದ ಮತ್ತು ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ಹೈಕಮಾಂಡ್, ಪಿಎಂ ಮೋದಿ ಮತ್ತು ದೆಹಲಿಯ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯಲ್ಲಿ ದೊಡ್ಡ ಬದಲಾವಣೆ ಬರಲಿದೆ, ನಗರಕ್ಕೆ ಸುವರ್ಣ ಅವಧಿ ಬರಲಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿ ಮತ್ತು ನಾವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ನನ್ನ ಗುರಿ ಮತ್ತು ಆದ್ಯತೆಯಾಗಿದೆ" ಎಂದು ರೇಖಾ ಗುಪ್ತಾ ಮೊದಲ ಬಾರಿಗೆ ತಮ್ಮ ಪ್ರಜೆಗಳಿಗೆ ಭರವಸೆ ನೀಡಿದ್ದಾರೆ.
ಅಭಿನಂದಿಸಿದ ಶಿವಸೇನಾ ನಾಯಕಿ: ಬುಧವಾರ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಅವರನ್ನು ಅಭಿನಂದಿಸಿದ ಶಿವಸೇನಾ ನಾಯಕಿ ಶೈನಾ ಎನ್‌ಸಿ ಅವರು "ಮಹಿಳೆಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ" ಎಂದು ಹೇಳಿದ್ದಾರೆ.
"ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ನಾನು ರೇಖಾ ಗುಪ್ತಾ ಅವರನ್ನು ಅಭಿನಂದಿಸಲು ಬಯಸುತ್ತೇನೆ ಮತ್ತು ಯಾವುದೇ ಪಕ್ಷದಿಂದ ಮಹಿಳೆ ಮುನ್ನಡೆದರೆ ಇಡೀ ಸಮಾಜ ಮುನ್ನಡೆಯುತ್ತದೆ ಎಂದು ನಾನು ನಂಬುತ್ತೇನೆ" ಎಂದು ಶೈನಾ ಎನ್‌ಸಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಗೆ ರೇಖಾ ಗುಪ್ತಾ ನೂತನ ಸಿಎಂ: ಇಂದು ಮಧ್ಯಾಹ್ನ 12 ಗಂಟೆಗೆ ಪ್ರಮಾಣ ಸ್ವೀಕಾರ