ಬೆಳಗಾವಿ: ಟೆರಿಟೋರಿಯಲ್ ಆರ್ಮಿಯಲ್ಲಿನ ಸೈನಿಕರ ಹುದ್ದೆಗಳ ನೇಮಕಾತಿ ರ್‍ಯಾಲಿಗೆ ನಿರೀಕ್ಷೆಗೂ ಮೀರಿ ಯುವಕರು ಬಂದಿದ್ದರಿಂದ ಬೆಳಗಾವಿ ಸಿಪಿಎಡ್ ಮೈದಾನ ಮುಂಭಾಗದ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಯಿತು. ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಯುವಕರಿಗೆ ಲಾಠಿ ರುಚಿ ತೋರಿಸಿದರು.
ಸೈನಿಕರ ಹುದ್ದೆಗಳ ನೇಮಕಾತಿ ರ್‍ಯಾಲಿಗೆ ಬೆಳಗಾವಿ, ಬಾಗಲಕೋಟೆ, ಧಾರವಾಡ ಸೇರಿದಂತೆ 16 ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಯುವಕರು ಬಂದಿದ್ದರು. ಒಮ್ಮೆಲೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದಿದ್ದರಿಂದ ನೂಕುನುಗ್ಗಲು ಉಂಟಾಯಿತು. ಯುವಕರನ್ನು ಚದುರಿಸಲು ಪೊಲೀಸರು ಲಾಠಿ ರುಚಿ ತೋರಿಸಿದ ಪ್ರಸಂಗವೂ ನಡೆಯಿತು. ಬಳಿಕ ಪೊಲೀಸರು ಮತ್ತು ಸೇನಾ ದಳದ ಸಿಬ್ಬಂದಿ ಎಲ್ಲರನ್ನೂ ಸರತಿ ಸಾಲಿನಲ್ಲಿ ನಿಲ್ಲಿಸಿದರು.
ಆರಂಭದಲ್ಲಿ ಸಿಪಿಎಡ್ ಮೈದಾನ ರಸ್ತೆಯಲ್ಲಿ ಕುಳಿತ ಯುವಕರ ಎತ್ತರ ಪರೀಕ್ಷೆಯನ್ನು ಅಲ್ಲಿಯೇ ಮಾಡಲಾಯಿತು. ನಂತರ ರಾಷ್ಟ್ರೀಯ ಮಿಲಿಟರಿ ಶಾಲೆ ಮೈದಾನದತ್ತ ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ತೆರಳಿದರು. ರ್‍ಯಾಲಿ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ - Darshan Fans On Media