ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ: 5.61 ಲಕ್ಷ ಜನ ಭೇಟಿ; ₹2.59 ಕೋಟಿ ಹಣ ಸಂಗ್ರಹ - ಲಾಲ್ ಬಾಗ್
10 ದಿನಗಳ ಕಾಲ ನಡೆದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆ ಬಿದ್ದಿದೆ.


Published : Jan 29, 2024, 8:58 AM IST
ಬೆಂಗಳೂರು: ನಗರದ ಲಾಲ್ ಬಾಗ್‌ನಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ 215ನೇ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಅಧಿಕೃತ ತೆರೆಬಿತ್ತು. ಕೊನೆಯ ದಿನ ಪ್ರದರ್ಶನ ವೀಕ್ಷಿಸಲು ಸಸ್ಯಕಾಶಿಗೆ ಜನಸಾಗರವೇ ಹರಿದುಬಂದಿತ್ತು.
ಜನವರಿ 18ರಿಂದ 28ರವರೆಗೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಒಟ್ಟಾರೆ 5.61 ಲಕ್ಷ ಜನ ಭೇಟಿ ನೀಡಿದ್ದಾರೆ. ಇದರಿಂದ ಇಲ್ಲಿಯವರೆಗೂ ಒಟ್ಟು 2.59 ಕೋಟಿ ರೂ. ಹಣ ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ಜ.18ರಿಂದ ಪ್ರಾರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಮೊದಲ ದಿನ ಅಂದರೆ ಜನವರಿ 19ರಂದು 18,256 ಜನ ಆಗಮಿಸಿ, 6.33 ಲಕ್ಷ ರೂ. ಹಣ ಸಂಗ್ರಹವಾಗಿತ್ತು. ಜ.20ರಂದು 26 ಸಾವಿರ ಮಂದಿ ಭೇಟಿ ನೀಡಿದ್ದು 18 ಲಕ್ಷ ರೂ ಸಂಗ್ರಹವಾಗಿತ್ತು. ಉಳಿದಂತೆ, ಜ.21ರಂದು 28,200 ಜನ ಆಗಮಿಸಿದ್ದು 29.5 ಲಕ್ಷ ರೂ ಸಂಗ್ರಹವಾಗಿತ್ತು. ಗಣರಾಜ್ಯೋತ್ಸವ ದಿನ 96,500 ಮಂದಿ ಭೇಟಿ ನೀಡಿದ್ದರು. ಈ ಮೂಲಕ 65 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅಲ್ಲದೇ ಸಾಲು ಸಾಲು ರಜಾ ದಿನಗಳಿದ್ದ ಕಾರಣಕ್ಕೆ ತೋಟಗಾರಿಕಾ ಇಲಾಖೆ ಪ್ರದರ್ಶನವನ್ನು ಮತ್ತೆರಡು ದಿನ ವಿಸ್ತರಿಸಿದ್ದರು.
ಜ.27ರಂದು ಒಟ್ಟು 55,396 ಜನರು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಸೇರಿದಂತೆ ಶಿವಶರಣರ ಅನುಭವ ಮಂಟಪದ ಪುಷ್ಪಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರು. ಅಂದು 37.5 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಕೊನೆಯ ದಿನವಾದ ಜ.28ರಂದು ಭಾರಿ ಜನದಟ್ಟನೆಯ ನಿರೀಕ್ಷೆಯಿತ್ತು. ಅದರಂತೆ (ಭಾನುವಾರ) 76,500 ಜನ ಆಗಮಿಸಿದ್ದಾರೆ. ಒಟ್ಟು 37.5 ಲಕ್ಷ ರೂ ಸಂಗ್ರಹವಾಗಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿಯೊಬ್ಬರಿಗೆ 80 ರೂ., ವಾರಾಂತ್ಯದಲ್ಲಿ 100 ರೂ, 12 ವರ್ಷದೊಳಗಿನ ಮಕ್ಕಳಿಗೆ 30 ರೂ.ಗಳು ನಿಗದಿಪಡಿಸಲಾಗಿತ್ತು.
ಬಗೆಬಗೆ ಗುಲಾಬಿ ಹೂವುಗಳು, ಲಿಲ್ಲಿ, ಜರ್ಬೇರಾ, ಅಂಥೋರಿಯಂ, ಆರ್ಕಿಡ್, ಅಲ್‌ಸ್ಟೋರೇಮೇರಿಯನ್ ಲಿಲ್ಲಿ, ಪೂಷಿಯಾ, ಅಗಪಾಂಥಸ್, ಕ್ಯಾಲಾಲಿಲ್ಲಿ, ಸೈಕ್ಲೋಮನ್ ಸೇರಿದಂತೆ ಸುಮಾರು ಇಪ್ಪತ್ತು ವಿವಿಧ ಜಾತಿಯ ಹೂವಿನಲ್ಲಿ ತಯಾರಿಸಲಾಗಿರುವ ಬಸವಣ್ಣನ ಮೂರ್ತಿ ಕಣ್ತುಂಬಿಕೊಳ್ಳಲು ಜನರ ದಂಡೇ ನೆರೆದಿತ್ತು.
ಇದನ್ನೂ ಓದಿ: ಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಜನಸಾಗರ