ಬೆಂಗಳೂರು: 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ (ಕೆಎಎಸ್) ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯು ಇಂದು ನಡೆಯಲಿದ್ದು, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು ಸಕಲ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಕೂಡ ಕೆಪಿಎಸ್‌ಸಿ ಸೂಚಿಸಿದೆ.
ಅಭ್ಯರ್ಥಿಗಳಿಗೆ ಮಾರ್ಗಸೂಚಿ: ಕೆಪಿಎಸ್‌ಸಿಯಿಂದ ಡೌನ್‌ಲೋಡ್ ಮಾಡಿದ ಮರು ಪರೀಕ್ಷೆಯ ಪ್ರವೇಶ ಪತ್ರದ ಜೊತೆಗೆ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಾದ ಮೊಬೈಲ್, ಕ್ಯಾಲ್ಕುಲೇಟರ್, ಸ್ಮಾರ್ಟ್‌ವಾಚ್, ಬ್ಲೂಟೂತ್, ವೈರ್ ಲೆಸ್ ಸೆಟ್, ಪೇಪರ್, ಪುಸ್ತಕ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ. ಅಭ್ಯರ್ಥಿಗಳು ತುಂಬು ತೋಳಿನ ಶರ್ಟ್ ಮತ್ತು ಫೇಸ್ ಮಾಸ್ಕ್ ಹಾಗೂ ಇತರ ವಸ್ತುಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಸಾಧಾರಣ ಚಪ್ಪಲಿಯನ್ನು ಮಾತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದು ಆಯೋಗ ಸೂಚನೆ ನೀಡಿದೆ.
ಮೊಬೈಲ್, ಬ್ಲೂಟೂತ್ ಮತ್ತು ಇತರೆ ಆಧುನಿಕ ಸಂವಹನ ಉಪಕರಣಗಳನ್ನು ಬಳಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಸಲಾಗುವುದು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಫೇಸ್ ರಿಕಗ್ನಿಶನ್ಸ್ ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕೆಪಿಎಸ್‌ಸಿಯಿಂದ ನೇಮಕವಾದ ಸಿಬ್ಬಂದಿ ಕೈಗೊಳ್ಳಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಪಾಸಣೆಗೆ ಒಳಪಡಿಸಬೇಕು. ಇದಕ್ಕಾಗಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಹ ಸೂಚಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ: 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆಯು ಬೆಂಗಳೂರು ಜಿಲ್ಲಾ ಕೇಂದ್ರದ 53 ಪರೀಕ್ಷಾ ಉಪ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷೆ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತವೆಂದು ಘೋಷಿಸಲಾಗಿದೆ. ಈ ಪ್ರದೇಶದ ವ್ಯಾಪ್ತಿಗಳಲ್ಲಿ ಬರುವ ಎಲ್ಲ ಜೆರಾಕ್ಸ್ ಅಂಗಡಿ ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಇದೇ ವರ್ಷ ಆಗಸ್ಟ್ನಲ್ಲಿ ನಡೆದಿತ್ತು. ಆದರೆ ಆ ದಿನದ ಪ್ರಶ್ನೆ ಪತ್ರಿಕೆಯನ್ನು ಕಳಪೆಯಾಗಿ ಭಾಷಾಂತರ ಮಾಡಲಾಗಿದೆ ಎಂದು ಗೊಂದಲ ಉಂಟಾಗಿದ್ದರಿಂದ ಮರುಪರೀಕ್ಷೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು.
ಇದನ್ನೂ ಓದಿ: 5, 8ನೇ ತರಗತಿಗಿದ್ದ 'ನೋ ಡಿಟೆನ್ಷನ್ ನೀತಿ' ರದ್ದುಪಡಿಸಿದ ಕೇಂದ್ರ ಸರ್ಕಾರ: ಇದರ ಲಾಭವೇನು?
ಇದನ್ನೂ ಓದಿ: ಬಾಗಲಕೋಟೆ, ಕಲಬುರಗಿ, ಚಿಕ್ಕಮಗಳೂರಿನಲ್ಲಿ ಅಂಗನವಾಡಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ