ಉಡುಪಿ: ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಕೇರಳದ ಸಿದ್ದಾರ್ಥ್ (22) ಎಂಬಾತನನ್ನು ಮಣಿಪಾಲ ಪೊಲೀಸರು ಹೆರ್ಗದ ಅಪಾರ್ಟ್ಮೆಂಟ್ ಒಂದರಿಂದ ಬಂಧಿಸಿದ್ದಾರೆ.
ಮಣಿಪಾಲದಲ್ಲಿ ಈತ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಜತೆಗೆ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಅವರ ತಂಡ ಪತ್ರಾಂಕಿತ ಅಧಿಕಾರಿ ಶಂಕರ್, ಉಪನಿರೀಕ್ಷಕ ರಾಘವೇಂದ್ರ ಸಿ., ಎಎಸ್‌ಐ ವಿವೇಕಾನಂದ, ಶೈಲೇಶ್ ಕುಮಾರ್ ಹಾಗೂ ಸಿಬ್ಬಂದಿ ಸುಕುಮಾರ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಅವರನ್ನೊಳಗೊಂಡ ತಂಡ ಜೂ. 5ರಂದು ಹೆರ್ಗ ಗ್ರಾಮದ ಅಪಾರ್ಟ್ಮೆಂಟ್ ಒಂದರ ಮೇಲೆ ದಾಳಿ ನಡೆಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯಿಂದ 20 ಸಾವಿರ ರೂ. ಮೌಲ್ಯದ ಸುಮಾರು 388 ಗ್ರಾಂ ಗಾಂಜಾ ಹಾಗೂ 45,000 ರೂ. ಮೌಲ್ಯದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಗಾಂಜಾವನ್ನು ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ದಾಸ್ತಾನು ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಮಾದಕ ವ್ಯಸನ ತಡೆ ಬಗ್ಗೆ ಪೊಲೀಸರು ಈಗ ವಿಶೇಷ ಕಾರ್ಯಾಚರಣೆ ಮಾಡುತ್ತಿದ್ದು, ಮುಖ್ಯವಾಗಿ ಪೂರೈಕೆಯನ್ನು ತಡೆಗಟ್ಟುವ ಉದ್ದೇಶ ಹೊಂದಿದ್ದಾರೆ. ಸ್ಥಳೀಯವಾಗಿ ಯಾರಾದರೂ ಗಾಂಜಾ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಮಣಿಪಾಲ ಠಾಣೆಯನ್ನು ಸಂಪರ್ಕಿಸುವಂತೆ ಅಥವಾ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಂತರ ನಿರೀಕ್ಷಣಾ ಜಾಮೀನು ಬೆನ್ನಲ್ಲೇ ಎಸ್ಐಟಿ ವಿಚಾರಣೆಗೆ ಭವಾನಿ ರೇವಣ್ಣ ಹಾಜರು - Bhavani Revanna SIT Investigation
ಆರೋಪಿ ಗಾಂಜಾವನ್ನು ಬಿಳಿ ಬಣ್ಣದ ಹಾಳೆಯಲ್ಲಿ ಸಿಗರೇಟ್ ಮಾದರಿಯಲ್ಲಿ ತುಂಬಿಸಿಟ್ಟು ಮಾರಾಟ ಮಾಡುತ್ತಿದ್ದ. ದಾಳಿ ವೇಳೆ ಒಟ್ಟು 43 ಹಾಳೆಯ ರೋಲ್‌ಗಳು ಕಂಡು ಬಂದಿದ್ದವು. ತಮಿಳುನಾಡಿನಿಂದ ಬೃಹತ್ ಪ್ರಮಾಣದಲ್ಲಿ ಗಾಂಜಾ ಖರೀದಿಸಿ, ಅದನ್ನು 1 ರೋಲ್‌ಗೆ ಸುಮಾರು 5 ಗ್ರಾಂಗಳಷ್ಟು ತುಂಬಿಸಿ ಮಾರಾಟ ಮಾಡುತ್ತಿದ್ದ. ಒಂದು ರೋಲ್‌ನಿಂದ 1 ಸಾವಿರ ರೂ. ಹಣ ಗಳಿಸುತ್ತಿದ್ದ. ವಿದ್ಯಾರ್ಥಿಗಳು ಸಿಗರೇಟ್‌ನಲ್ಲಿರುವ ತಂಬಾಕು ತೆಗೆದು ಅದಕ್ಕೆ ಗಾಂಜಾ ತುಂಬಿಸಿ ಸೇದುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಇದನ್ನೂ ಓದಿ: Watch.. ಜೀವದ ಹಂಗು ತೊರೆದು ಮಕ್ಕಳನ್ನು ಹರಿಯುವ ಹಳ್ಳ ದಾಟಿಸಿದ ಪೋಷಕರು: ವಿಡಿಯೋ ವೈರಲ್ - Rain Effects