ಬೆಂಗಳೂರು: ರಾಜ್ಯಪಾಲರು ಆರು ಮಸೂದೆಗಳನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಇತ್ತೀಚೆಗಷ್ಟೇ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಒಪ್ಪಿಕೊಂಡಿದ್ದರು. ಅಷ್ಟಕ್ಕೂ ರಾಜ್ಯಪಾಲರು ಯಾವೆಲ್ಲಾ ಪ್ರಮುಖ ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದಾರೆ. ಯಾವ ಕಾರಣಗಳಿಗೆ ಮಸೂದೆಗಳಿಗೆ ಅಂಕಿತ ಹಾಕದೇ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ ಎಂಬ ವರದಿ ಇಲ್ಲಿದೆ.
ಉಭಯ ಸದನಗಳಲ್ಲಿ ಅಂಗೀಕಾರವಾದ ಮಸೂದೆಗಳನ್ನು ಸರ್ಕಾರ ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿ ಕೊಡಲಾಗುತ್ತದೆ. ರಾಜ್ಯಪಾಲರ ಅಂಕಿತದ ಬಳಿಕವೇ ವಿಧೇಯಕಗಳು ಕಾಯ್ದೆಯಾಗಿ ಜಾರಿಗೆ ಬರುತ್ತದೆ. ಅದೇ ರೀತಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈವರೆಗೆ 19 ಮಸೂದೆಗಳನ್ನು ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕಾಗಿ ಡಿ.28, 2023ಕ್ಕೆ ರಾಜಭವನಕ್ಕೆ ಕಳುಹಿಸಲಾಗಿತ್ತು. ಈ ವಿಧೇಯಕಗಳಲ್ಲಿ ಬಹುತೇಕ ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತಗೊಂಡಿವೆ. ಈ ಪೈಕಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೆಚ್ಚಿನ ಮಾಹಿತಿ, ಕೆಲ ಸ್ಪಷ್ಟೀಕರಣ ಕೇಳಿ ಆರು ಮಸೂದೆಗಳಿಗೆ ಅಂಕಿತ ಹಾಕದೇ ವಾಪಸ್ ಕಳುಹಿಸಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ 2023: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ನ್ನು ಮತ್ತಷ್ಟು ತಿದ್ದುಪಡಿ ಮಾಡುವ ವಿಧೇಯಕ ಇದಾಗಿದೆ. ಆ ಮೂಲಕ ಬಾಂಬೆ ಸಾರ್ವಜನಿಕ ನ್ಯಾಸ ಅಧಿನಿಯಮ 1950ನ್ನು ಸಾರ್ವಜನಿಕ ಟ್ರಸ್ಟ್ಗಳಿಗೆ ಅನ್ವಯಿಸಲು ನಿಯಮಗಳ ಪುನರುಜ್ಜೀವನಕ್ಕಾಗಿ ತಿದ್ದುಪಡಿ ತರಲಾಗುತ್ತಿದೆ. ವಿಧಾನಮಂಡಲದಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ನೀಡಿ ಡಿ.28ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದರು.
ರಾಜ್ಯಪಾಲರು ಬಿಲ್ ಸಂಬಂಧ ಹೆಚ್ಚಿನ ಸ್ಪಷ್ಟೀಕರಣ ಕೋರಿದ್ದಾರೆ. ಜೊತೆಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ಹಾಗೂ ತಿದ್ದುಪಡಿಯನ್ನು 2011 ಹಾಗೂ 2012ರಲ್ಲಿ ಮಾಡಲಾಗಿತ್ತು. ಆದರೆ, ಹೈ ಕೋರ್ಟ್ ಧಾರವಾಡ ಪೀಠ ಆ ಕಾಯ್ದೆಯನ್ನು ತಿರಸ್ಕರಿಸಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಪ್ರಕರಣದ ವಿಚಾರಣೆ ಕೊನೆ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ತಿದ್ದುಪಡಿ ಮಸೂದೆ ತರಬಹುದೇ ಎಂದು ರಾಜ್ಯಪಾಲರು ಸ್ಪಷ್ಟೀಕರಣ ಕೇಳಿ ಮಸೂದೆಯನ್ನು ಜ.11ಕ್ಕೆ ವಾಪಸ್ ಕಳುಹಿಸಿದ್ದಾರೆ.
ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ 2023: ಈ ತಿದ್ದುಪಡಿ ಮಸೂದೆ ಮೂಲಕ ಸಾಲದ ಕರಾರು ಪತ್ರ, ಅಡಮಾನ, ದತ್ತು, ಹಸ್ತಾಂತರ ಪ್ರಮಾಣಪತ್ರ, ಒಪ್ಪಂದ ಪತ್ರ ಸೇರಿ 54 ನೋಂದಣಿಯೇತರ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಕನಿಷ್ಠ ಎರಡರಿಂದ ನಾಲ್ಕು ಪಟ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ದತ್ತು ಪ್ರಮಾಣಪತ್ರದ ಮುದ್ರಾಂಕ ಶುಲ್ಕವು 500 ರಿಂದ 1,000 ರೂಗಳಿಗೆ ಹೆಚ್ಚಳವಾಗಲಿದೆ. ಅಫಿಡವಿಟ್ಗಳ ಶುಲ್ಕ 20 ರಿಂದ 100 ರೂ.ಗಳಿಗೆ, 1 ಲಕ್ಷದ ವರೆಗಿನ ಚಿಟ್‌ಫಂಡ್ ಒಪ್ಪಂದದ ಮುದ್ರಾಂಕ ಶುಲ್ಕವನ್ನು 100ರಿಂದ 500 ರೂ.ಗಳಿಗೆ, 1 ಲಕ್ಷದ ವರೆಗಿನ ಸಾಲದ ಒಪ್ಪಂದದ ಮೇಲಿನ ಮುದ್ರಾಂಕ ಶುಲ್ಕವನ್ನು ಶೇ. 0.1ರಿಂದ ಶೇ 0.5ಕ್ಕೆ ಹೆಚ್ಚಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖೀಸಲಾಗಿದೆ. ವಿವಾಹ ವಿಚ್ಛೇದನ ಪ್ರಮಾಣಪತ್ರ, ವಿಭಾಗಪತ್ರ, ಬಾಂಡ್‌ಗಳು, ಗುತ್ತಿಗೆ ಒಪ್ಪಂದಗಳೂ ಈ ಮಸೂದೆ ವ್ಯಾಪ್ತಿಯಲ್ಲಿವೆ. ಕಂಪನಿ ಆರಂಭಕ್ಕೆ ಸಂಬಂಧಿಸಿದ ಒಪ್ಪಂದ, ಚಿಟ್‌ಫಂಡ್ ಒಪ್ಪಂದಗಳು ಮುಂತಾದವುಗಳ ಮುದ್ರಾಂಕ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ.
ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತವಾದ ಈ ಮಸೂದೆಯನ್ನೂ ಡಿ.28ಕ್ಕೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕದೇ ಹೆಚ್ಚಿನ ಮಾಹಿತಿ ಕೋರಿ ಜ.11ರಂದು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಶುಲ್ಕ ಹೆಚ್ಚಿಸಲಾದ ಅನೇಕ ದಾಖಲೆಗಳನ್ನು ಬಡವರು ಸೇರಿ ಜನಸಾಮಾನ್ಯರು ಬಳಸುತ್ತಾರೆ. ಹೀಗಾಗಿ ಸ್ಟಾಂಪ್ ಡ್ಯೂಟಿ ಹೆಚ್ಚಳವನ್ನು ಮತ್ತೊಮ್ಮೆ ಪರಿಶೀಲಿಸುವ ಅಗತ್ಯ ಇದೆ. ಸರ್ಕಾರ ಸ್ಟಾಂಪ್ ಡ್ಯೂಟಿ ದರವನ್ನು ಕಡಿತಗೊಳಿಸಬಹುದಾ ಅಥವಾ ದಾಖಲೆಗಳ ಬಳಕೆ ಹಾಗೂ ಜನರ ಆರ್ಥಿಕ ಹಿನ್ನೆಲೆಯ ಆಧಾರದಲ್ಲಿ ಸ್ಲ್ಯಾಬ್ ವೈಸ್ ಶುಲ್ಕ ವಿಧಿಸಬಹುದೇ ಎಂದು ಸ್ಪಷ್ಟೀಕರಣ ಕೋರಿ ಹಿಂತಿರುಗಿಸಿದ್ದಾರೆ.
ಇದನ್ನೂ ಓದಿ: ಯುಸಿಸಿ ವರದಿ ಅಂಗೀಕರಿಸಿದ ಉತ್ತರಾಖಂಡ ಸರ್ಕಾರ: ಅಧಿವೇಶನದಲ್ಲಿ ಮಸೂದೆಯಾಗಿ ಮಂಡನೆ ಸಾಧ್ಯತೆ
3.ಬಿಬಿಎಂಪಿ ಮತ್ತು ಕೆಲವು ಇತರೆ ಕಾನೂನು (ತಿದ್ದುಪಡಿ) ವಿಧೇಯಕ: ಈ ಮಸೂದೆ ಮೂಲಕ ಬಿಬಿಎಂಪಿಗೆ ನಕ್ಷೆ ಮಂಜೂರಾತಿ ಹಾಗೂ ಇತರ ಮಂಜೂರಾತಿಗಳಿಗೆ ಶುಲ್ಕ ವಿಧಿಸಲು ಅಧಿಕಾರ ಸಿಗಲಿದೆ. ಸದ್ಯ 2015ರ ಸುತ್ತೋಲೆ ಆಧಾರದಲ್ಲಿ ಬಿಬಿಎಂಪಿ 1,712 ಕೋಟಿ ರೂ.ಹಣವನ್ನು 2015 ರಿಂದ 2023ವರೆಗೆ ಸಂಗ್ರಹಿಸಿತ್ತು. ಆದರೆ, ಹೈಕೋರ್ಟ್ ಈ ಸುತ್ತೋಲೆಯನ್ನು ರದ್ದುಗೊಳಿಸಿತ್ತು. ಅದರಂತೆ ಸರ್ಕಾರ ಸಂಗ್ರಹಿಸಿದ 1,712 ಕೋಟಿಯನ್ನು ಮರಳಿಸಬೇಕಾಗಿತ್ತು. ಈ ತಿದ್ದುಪಡಿ ವಿಧೇಯಕ ಮೂಲಕ ಸಂಗ್ರಹಿತ ಮೊತ್ತವನ್ನು ರಕ್ಷಿಸಲು ಮುಂದಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಅಂಗೀಕೃತವಾಗಿತ್ತು.
ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಆರಂಭಿಸುವ ಪ್ರಮಾಣಪತ್ರ ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವ ವೇಳೆ ನೆಲ ಬಾಡಿಗೆ ಹಾಗೂ ಶುಲ್ಕವನ್ನು ಕಾಯ್ದೆಗೆ ವಿರುದ್ಧವಾಗಿ ವಸೂಲಿ ಮಾಡಲಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಶೇ.50ರಷ್ಟು ನೆಲ ಬಾಡಿಗೆ ವಸೂಲಿ ಮಾಡಿ ನಕ್ಷೆ ಮಂಜೂರಾತಿ ಸೇರಿ ಇನ್ನಿತರ ಪ್ರಮಾಣಪತ್ರ ನೀಡುವಂತೆ ಸೂಚಿಸಿತ್ತು. ಈ ಮಸೂದೆಯನ್ನು ರಾಜ್ಯಪಾಲರು ಅಂಕಿತ ಹಾಕದೇ ಜ.5ಕ್ಕೆ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಹೈಕೋರ್ಟ್‌ನಲ್ಲಿ ಈ ಪ್ರಕರಣ ಇದ್ದು, ಈ ತಿದ್ದುಪಡಿ ಬಿಲ್ನಿಂದ ಆಗುವ ಕಾನೂನು ಪರಿಣಾಮಗಳೇನು ಎಂಬ ಬಗ್ಗೆ ಸರ್ಕಾರದ ಬಳಿ ಹೆಚ್ಚಿನ ಸ್ಪಷ್ಟನೆ ಕೋರಿದ್ದಾರೆ.
4.SCSPTSP (ತಿದ್ದುಪಡಿ) ವಿಧೇಯಕ: ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ (ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು. SCSPTSP ಅನುದಾನವನ್ನು ಇತರ ಉದ್ದೇಶಕ್ಕೆ ಬಳಸದಂತೆ ಹಾಗೂ ಉಪಮುಖ್ಯಮಂತ್ರಿ ಮತ್ತು ಬುಡಕಟ್ಟು ಕಲ್ಯಾಣ ಸಚಿವರನ್ನು ರಾಜ್ಯ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್‌ಗೆ ಪದನಿಮಿತ್ತ ಸದಸ್ಯರಾಗಿ ಸೇರಿಸಲು, ಬುಡಕಟ್ಟು ಕಲ್ಯಾಣ ಸಚಿವರನ್ನು ಅನುಸೂಚಿತ ಜಾತಿಗಳ ಉಪಹಂಚಿಕೆ/ಬುಡಕಟ್ಟು ಉಪಹಂಚಿಕೆ ನೋಡಲ್ ಏಜೆನ್ಸಿಗೆ ಉಪಾಧ್ಯಕ್ಷರಾಗಿ ಸೇರಿಸಲು ತಿದ್ದುಪಡಿ ಮಾಡಲಾಗಿತ್ತು.
ಕೇಂದ್ರ ಸರ್ಕಾರ ರಾಷ್ಟ್ರಪತಿಯವರ ನಿರ್ದೇಶನದ ಅನುಸಾರ ರಾಜ್ಯಗಳಲ್ಲಿ ಬುಡಕಟ್ಟು ಸಲಹಾ ಕೌನ್ಸಿಲ್ ಸ್ಥಾಪಿಸುವಂತೆ ಸೂಚಿಸಿತ್ತು. ಆದರೆ ಈವರೆಗೆ ಸಲಹಾ ಕೌನ್ಸಿಲ್ ರಚನೆಯಾಗಿಲ್ಲ. ಹೀಗಾಗಿ ಬುಡಕಟ್ಟು ಸಲಹಾ ಕೌನ್ಸಿಲ್ ರಚನೆಯ ಸ್ಥಿತಿಗತಿ ಮಾಹಿತಿಯೊಂದಿಗೆ ಮರುಕಡತ ಸಲ್ಲಿಸುವಂತೆ ತಿಳಿಸಿ ಮಸೂದೆಗೆ ಅಂಕಿತ ಹಾಕಿದೇ ರಾಜ್ಯಪಾಲರು ಕಳುಹಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ಭ್ರಷ್ಟಾಚಾರ ತಡೆ ಮತ್ತು ನೇಮಕಾತಿಯಲ್ಲಿ ಅನ್ಯಾಯದ ಆಚರಣೆಗಳು) ವಿಧೇಯಕ: ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ಭ್ರಷ್ಟಾಚಾರ ತಡೆ ಮತ್ತು ನೇಮಕಾತಿಯಲ್ಲಿ ಅನ್ಯಾಯದ ಆಚರಣೆಗಳು) ವಿಧೇಯಕ 2023ಕ್ಕೆ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ಜ.16ಕ್ಕೆ ಹೆಚ್ಚಿನ ಮಾಹಿತಿ ಕೋರಿ ಈ ಬಿಲ್ ಹಿಂತಿರುಗಿಸಿದ್ದಾರೆ.
ಈ ವಿಧೇಯಕದ ಕಾರ್ಯ ವ್ಯಾಪ್ತಿಗೆ ಹಲವು ಪ್ರಾಧಿಕಾರಗಳು ಬರುತ್ತವೆ. ಹೀಗಾಗಿ ಸಂಬಂಧಿತ ಪ್ರಾಧಿಕಾರಿಗಳ ಸಲಹೆ, ಅಭಿಪ್ರಾಯ ಕೇಳುವುದು ಅಗತ್ಯ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಹೇಳಿತ್ತು. ಜೊತೆಗೆ ಸಿಎಂ ಈ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದು ಕಡತ ಸಲ್ಲಿಸಲು ಸೂಚನೆ ನೀಡಿದ್ದರು. ಆದರೆ, ಸಂಬಂಧಿತ ಪ್ರಾಧಿಕಾರಗಳು ಹಾಗೂ ಕಾನೂನು ಇಲಾಖೆಯ ಅಭಿಪ್ರಾಯಗಳು ಕ್ಯಾಬಿನೆಟ್ ನೋಟ್ ನಲ್ಲಾಗಲಿ ಕಡತದಲ್ಲಾಗಲಿ ಲಭ್ಯವಿಲ್ಲ. ಹೀಗಾಗಿ ಕಾನೂನು ಇಲಾಖೆಯ ಅಭಿಪ್ರಾಯ ಮತ್ತು ಸಂಬಂಧಿತ ಪ್ರಾಧಿಕಾರಿಗಳು ನೀಡಿರುವ ಸಲಹೆಗಳ ಮಾಹಿತಿಯನ್ನು ನೀಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚಿಸಿದ್ದಾರೆ.
ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ: ಇತ್ತ ಸವದತ್ತಿ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕವೂ ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅಂಗೀಕೃತವಾಗಿ, ಅಂಕಿತಕ್ಕೆ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗಿತ್ತು. ಆದರೆ ರಾಜ್ಯಪಾಲರು ಮಸೂದೆ ಸಂಬಂಧ ಹೆಚ್ಚಿನ ಮಾಹಿತಿ ನೀಡುವಂತೆ ಕೋರಿ ಸರ್ಕಾರಕ್ಕೆ ಬಿಲ್ ಹಿಂತಿರುಗಿಸಿದ್ದಾರೆ.
ಇದನ್ನೂ ಓದಿ: ಟ್ಯಾಕ್ಸಿ, ಕ್ಯಾಬ್ ಪ್ರಯಾಣಕ್ಕಿನ್ನು ಮನಬಂದಂತೆ ದರ ಹಾಕುವಂತಿಲ್ಲ: ಸರ್ಕಾರದಿಂದಲೇ ರೇಟ್ ಫಿಕ್ಸ್ - ಹೀಗಿದೆ ದರ ಪಟ್ಟಿ