ಬೆಂಗಳೂರು: ಕಡಿಮೆ ಒತ್ತಡದ ಪ್ರದೇಶವು ಇಂದು ನೈಋತ್ಯ ಬಂಗಾಳ ಕೊಲ್ಲಿಯಲ್ಲಿದ್ದು, ಸಂಬಂಧಿತ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ. ವರೆಗೆ ವಿಸ್ತರಿಸಲಿದೆ. ಮುಂದಿನ ಎರಡು ದಿನಗಳಲ್ಲಿ ಇದು ಹೆಚ್ಚಾಗುವ ಮೂಲಕ ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ವಿಸ್ತರಿಸಿದೆ. ರಾಜ್ಯಾದ್ಯಂತ ಮಳೆಯ ಪ್ರಭಾವ ಕಡಿಮೆಯಾಗಿ ಶೀತ ಅಲೆ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತೀವ್ರ ಶೀತದ ಅಲೆ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ.
ಉತ್ತರ ಆಂತರಿಕ ಕರ್ನಾಟಕದ ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೀತ ಅಲೆ ಮೇಲುಗೈ ಸಾಧಿಸುವ ಮುನ್ಸೂಚನೆ ಇದೆ. ಕರ್ನಾಟಕದ ಒಳಭಾಗದ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಆಳವಿಲ್ಲದ ಮಂಜು/ ದಟ್ಟ ಮಂಜು ಆವರಿಸಿದೆ. ಮುಂದಿನ 24 ಗಂಟೆಗಳಲ್ಲಿ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತ ಅಲೆ ಹೆಚ್ಚಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಯಚೂರು, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ರವಾನಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ: ಹಾಸನ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಡಿಸೆಂಬರ್ 21ರ ನಂತರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ:ತೀವ್ರ ಚಳಿ ಜೊತೆಗೆ ಹದಗೆಟ್ಟ ದೆಹಲಿ ವಾಯು ಗುಣಮಟ್ಟ; ಜಿಆರ್ಎಪಿ 4ನೇ ಹಂತ ಜಾರಿ
6-7 ಡ್ರಿಗಿ ಸೆಲ್ಸಿಯಸ್ ನಷ್ಟು ತಾಪಮಾನ ಕಡಿಮೆಯಾಗುವ ಸಾಧ್ಯತೆ: ಬೀದರ್, ಕಲಬುರಗಿ, ವಿಜಯನಪುರ ಜಿಲ್ಲೆಗಳಲ್ಲಿ ತೀವ್ರ ಚಳಿ ಇರಲಿದ್ದು, ತಾಪಮಾನವು 6-7 ಡ್ರಿಗಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬೀದರ್ನಲ್ಲಿ 7.5 ಡ್ರಿಗಿ ಸೆಲ್ಸಿಯನ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನ ಹೆಚ್ಎಎಲ್ನಲ್ಲಿ 26.0 ಡ್ರಿಗಿ ಸೆಲ್ಸಿಯನ್ ಗರಿಷ್ಠ ಉಷ್ಣಾಂಶ, 14.7 ಡಿಗ್ರಿ ಸೆಲ್ಸಿಯನ್ ಕನಿಷ್ಠ ಉಷ್ಣಾಂಶ ಇದೆ. ರಾಜಧಾನಿ ಬೆಂಗಳೂರಿನಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 26.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 14.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ತಾಪಮಾನದ ಮುನ್ಸೂಚನೆ: ಆಂತರಿಕ ಕರ್ನಾಟಕದ ಮೇಲೆ ಎರಡು ದಿನಗಳ ನಂತರ ಕನಿಷ್ಠ ತಾಪಮಾನ ಕ್ರಮೇಣ ಹೆಚ್ಚಾಗುತ್ತದೆ. ಕರಾವಳಿ ಕರ್ನಾಟಕದ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಬೆಂಗಳೂರು ನಗರ ಮತ್ತು ನೆರೆಹೊರೆಯ ಸ್ಥಳೀಯ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮುಖ್ಯವಾಗಿ ನಿರ್ಮಲ ಆಕಾಶ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು/ದಟ್ಟ ಮಂಜು ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಚಳಿ: ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ