ಬೆಂಗಳೂರು: ರಾಜ್ಯ ಸರ್ಕಾರದ 'ಶಕ್ತಿ' ಯೋಜನೆ ಜಾರಿಯಾದ ನಂತರ ಆದಾಯ ಹೆಚ್ಚಾಗಿದ್ದು, ಸಾರಿಗೆ ನಿಗಮಗಳು ಲಾಭದತ್ತ ಬರುತ್ತಿವೆ. ಇದೇ ವೇಳೆ, ನಿರ್ವಹಣೆ, ಡೀಸೆಲ್ ದರ ಹೆಚ್ಚಳವಾಗಿದೆ. ಆದರೆ ಟಿಕೆಟ್ ದರ ಹೆಚ್ಚಿಸಿಲ್ಲದ ಕಾರಣದಿಂದಾಗಿ ಲಾಭವನ್ನು ತೋರಿಸಲಾಗುತ್ತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿಗಮಗಳಿಗೆ ಲಾಭವಾಗುತ್ತಿದೆ. ಬಿಎಂಟಿಸಿ 10 ವರ್ಷದಿಂದ ಟಿಕೆಟ್ ದರ ಹೆಚ್ಚಿಸಿಲ್ಲ. 'ಶಕ್ತಿ' ಯೋಜನೆ ಜಾರಿ ನಂತರ ಆದಾಯ ಹೆಚ್ಚಾದರೂ ನಿರ್ವಹಣೆ, ಡೀಸೆಲ್, ವೇತನದ ಕಾರಣಕ್ಕೆ ಲಾಭ ತೋರಿಸಲಾಗುತ್ತಿಲ್ಲ. 2020ರಲ್ಲಿ ಉಳಿದ ಮೂರು ಸಾರಿಗೆ ನಿಗಮಗಳಿಂದ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಇದರ ನಡುವೆ ಡೀಸೆಲ್ ದರ ಹೆಚ್ಚಳವಾಗಿದೆ. ಹಾಗಾಗಿ ಲಾಭ ತೋರಿಸಲಾಗಿಲ್ಲ. ಆದರೂ ಮುಂದಿನ ದಿನಗಳಲ್ಲಿ ಲಾಭಕ್ಕೆ ಸಾರಿಗೆ ನಿಗಮಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2024ರ ಜೂನ್ವರೆಗೆ 'ಶಕ್ತಿ' ಯೋಜನೆಯಡಿ 4,453.50 ಕೋಟಿ ಬಿಡುಗಡೆ ಮಾಡಿದ್ದು 1,413.47 ಕೋಟಿ ಬಾಕಿ ಇದೆ. ಯೋಜನೆಗೆ 5,015 ಕೋಟಿ ಹಣವನ್ನು ಈ ಬಾರಿ ಬಜೆಟ್ನಲ್ಲಿ ಇಡಲಾಗಿದೆ. ಈ ವರ್ಷ ಸ್ವಲ್ಪ ಕೊರತೆಯಾಗಬಹುದು. ಇದನ್ನು ಸರಿಪಡಿಸಲು ಸಿಎಂ ಗಮನಕ್ಕೆ ತರಲಾಗಿದೆ. ಪೂರಕ ಬಜೆಟ್ನಲ್ಲಿ ಒದಗಿಸುವ ಭರವಸೆ ಇದೆ ಎಂದರು.
ಧರ್ಮರಾಯಸ್ವಾಮಿ ದೇಗುಲ ಒತ್ತುವರಿ ತೆರವಿಗೆ ಕ್ರಮ: ಬೆಂಗಳೂರಿನಲ್ಲಿ ಒತ್ತುವರಿಯಾಗಿರುವ ಧರ್ಮರಾಯಸ್ವಾಮಿ ದೇವಾಲಯದ ಜಾಗವನ್ನು ತೆರವುಗೊಳಿಸಲು ಕೋರ್ಟ್ನಿಂದ ಇದ್ದು, ನ್ಯಾಯಾಲಯದ ತಡೆಯಾಜ್ಞೆ ತೆರವಿಗೆ ಕ್ರಮ ವಹಿಸಿ, ಆದಷ್ಟು ಬೇಗ ಒತ್ತುವರಿ ತೆರವು ಮಾಡಿ ದೇವಾಲಯದ ಜಾಗ ಉಳಿಸುವ ಕೆಲಸ ಮಾಡಲಾಗುತ್ತದೆ ಎಂದು ಮುಜಿರಾಯಿ ಸಚಿವರೂ ಆದ ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಧರ್ಮರಾಯಸ್ವಾಮಿ ದೇವಾಲಯದ ಜಾಗ 15.12 ಎಕರೆ ಇದ್ದು, 211 ಜನ 6 ಎಕರೆ ಒತ್ತುವರಿ ಮಾಡಿದ್ದಾರೆ. ಇವರ ವಿರುದ್ಧ ಭೂ ಒತ್ತುವರಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಇನ್ನು ತೀರ್ಪು ಬಂದಿಲ್ಲ. ಒತ್ತುವರಿ ವೇಳೆ ಆರು ಜನ ಅಧಿಕಾರಿಗಳು ಇದ್ದರೂ ಒತ್ತುವರಿ ತೆರವು ಮಾಡಿಸಲು ಆಗಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಆಗಿಲ್ಲ. ಕೋರ್ಟ್ನಲ್ಲಿ ತಡೆ ತೆರವಾಗಬೇಕು. ಆಗ ಎಲ್ಲ ಸಮಸ್ಯೆ ಪರಿಹಾರವಾಗಲಿದೆ. ಎಜಿ ಜೊತೆ ಮಾತನಾಡಿ, ತಡೆ ತೆರವಿಗೆ ಕ್ರಮ ವಹಿಸಲಾಗುತ್ತದೆ. ತಡೆ ತೆರವಾದರೆ ನಾವು ಕಾಂಪೌಂಡ್ ಹಾಕುವ ಕೆಲಸ ಮಾಡಬಹುದು. ಈ ಜಾಗ ದೇವಾಲಯಕ್ಕೆ ಉಳಿಯಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.
ಈ ವಿಚಾರದಲ್ಲಿ ಲೋಪ ಆಗಿರುವುದು ನಿಜ, 30-35 ವರ್ಷದ ಹಿಂದೆ ಒತ್ತುವರಿ ಆಗಿದೆ. ಆಗಲೇ ಕಾಂಪೌಂಡ್ ಹಾಕಿದ್ದರೆ, ಈ ಸಮಸ್ಯೆ ಇರುತ್ತಿರಲಿಲ್ಲ. ಮುಂದಿನ ಅಧಿವೇಶನದ ಒಳಗಾದರೂ ಸೀನಿಯರ್ ಕೌನ್ಸಿಲ್ ನೇಮಿಸಿ ತಡೆ ತೆರವು ಮಾಡಿ ಕಾಂಪೌಂಡ್ ಹಾಕುವ ಕೆಲಸ ಮಾಡಲಾಗುತ್ತದೆ. ರಾಜ್ಯದಲ್ಲಿ 35 ಸಾವಿರ ದೇವಾಲಯವಿದೆ. ಎಲ್ಲ ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಸರ್ಕಾರದ ಉತ್ತರ ಖಂಡಿಸಿ ಬಾವಿಗಿಳಿದ ರವಿಕುಮಾರ್ ಧರಣಿ ನಡೆಸಿದರು. ರವಿಕುಮಾರ್ ನಿಲುವು ಬೆಂಬಲಿಸಿದ ಜೆಡಿಎಸ್ನ ಭೋಜೇಗೌಡ, 35 ವರ್ಷ ಒತ್ತುವರಿಯಾಗಿದೆ ಎನ್ನುವ ಒಂದೇ ಅಂಶದಿಂದ ಒತ್ತುವರಿದಾರರ ಪರವಾಗಿ ತೀರ್ಪು ಬರುವ ಸಾಧ್ಯತೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಸಹ 35 ವರ್ಷ ಎಂಬ ಹೇಳಿಕೆಯು ಸರ್ಕಾರಕ್ಕೆ ವಿರುದ್ಧವಾಗಲಿದೆ. ದಾವೆದಾರರಿಗೆ ಅನುಕೂಲಕರ ಉತ್ತರವಾಗಲಿದೆ. ಹಾಗಾಗಿ ಇದನ್ನು ವಾಪಸ್ ಪಡೆಯಬೇಕು ಒತ್ತಾಯಿಸಿದರು.
ನಂತರ ರಾಮಲಿಂಗಾರೆಡ್ಡಿ ಮಾತನಾಡಿ, 211 ಜನ ಒತ್ತುವರಿದಾರರ ಮೇಲೆ ದೂರು ನೀಡಲಾಗಿದೆ. ಇದು ತೀರ್ಮಾನವಾಗಬೇಕಿದೆ. 2020ರಲ್ಲಿ ತಡೆ ತರಲಾಗಿದೆ. ಅದು ತೆರವಾಗಬೇಕು. ಎಲ್ಲ ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ರಾಜಸ್ವ-ಬಂಡವಾಳ ತಪ್ಪು ವರ್ಗೀಕರಣ, ರಾಜಸ್ವ ವೆಚ್ಚ ₹50.35 ಕೋಟಿ ಕಡಿಮೆ: ಲೆಕ್ಕಪರಿಶೋಧನಾ ವರದಿಯಲ್ಲಿ ಬಹಿರಂಗ