ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ದುರ್ಬಲಗೊಳ್ಳುತ್ತಿದ್ದು ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಶನಿವಾರದಿಂದ ಮಳೆ ಕ್ಷೀಣವಾಗಲಿದೆ. ಆದರೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ರಾಜ್ಯದ ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್ ನೀಡಲಾಗಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲಿ ಮುಂದಿನ 24 ಗಂಟೆ ಗುಡುಗುಸಹಿತ ಸಾಧಾರಣ ಮಳೆ ಸುರಿಯಲಿದೆ. ಮೂರ್ನಾಲ್ಕು ದಿನಗಳಿಂದ ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸುರಿಯುತ್ತಿದ್ದ ಮಳೆ ಇಳಿಮುಖವಾಗಲಿದೆ. ಕರಾವಳಿ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸೆಪ್ಟಂಬರ್ 28ರಿಂದ ಕ್ಷೀಣವಾಗಲಿದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಮತ್ತು 21 ಡಿಗ್ರಿ ಇರಲಿದೆ.
ಗುರುವಾರ ಸಾಧಾರಣ ಮಳೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ದಾವಣಗೆರೆ ಜಿಲ್ಲೆ, ಕಲಬುರಗಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ.
ಸೆ.30ಕ್ಕೆ ಮುಂಗಾರು ಮುಕ್ತಾಯ, ಅಕ್ಟೋಬರ್ 1ರಿಂದ ಹಿಂಗಾರು ಶುರು: ರಾಜ್ಯದಲ್ಲಿ ಪುಸಕ್ತ ಸಾಲಿನ ಮುಂಗಾರು ಸೆಪ್ಟಂಬರ್ 30ರಂದು ಕೊನೆಗೊಳ್ಳಲಿದ್ದು, ಅಕ್ಟೋಬರ್ 1ರಿಂದ ಹಿಂಗಾರು ಶುರುವಾಗಲಿದೆ. ಈ ಬಾರಿ ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟೇ ವರ್ಷಧಾರೆಯಾಗಲಿದೆ. ರಾಜ್ಯದಲ್ಲಿ ಜೂನ್‌ನಿಂದ ಆಗಸ್ಟ್‌ವರೆಗೆ ಉತ್ತಮ ಮಳೆಯಾಗಿದ್ದು, ಸೆಪ್ಟಂಬರ್ 1ರಿಂದ 26ರವರೆಗೆ ಶೇ.16ರಷ್ಟು ಮಳೆಯಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಶೇ.90ರಷ್ಟು ಮಳೆ ಕುಂಠಿತವಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ತಿಳಿಸಿದ್ದಾರೆ.