ಕಡಬ/ದ.ಕ: ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿದ ಅಪರಾಧಿಗಳಿಗೆ ಇಲ್ಲಿನ ನ್ಯಾಯಾಲಯ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಪನ್ಯ ಎಂಬಲ್ಲಿ 2022ರ ಏಪ್ರಿಲ್ 13ರಂದು ಮಂಗಳೂರು ತಾಲೂಕಿನ ಬೋಳಾರ್ ನಿವಾಸಿಗಳಾದ ಅಬ್ದುಲ್ ಅಝೀಝ್ ಮತ್ತು ಅಸಿಮಾ ಎಂಬವರು ಮೊಹಮ್ಮದ್ ಶಮೀರ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಹಲ್ಲೆಗೈದು ಜೀವ ಬೆದರಿಕೆ ಒಡ್ಡಿದ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅಂದಿನ ತನಿಖಾಧಿಕಾರಿಗಳಾದ ಕಡಬ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ ಪ್ರಕರಣ ದಾಖಲಿಸಿಕೊಂಡು, ಆರೋಪಿತರ ವಿರುದ್ಧ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಅಭಿಯೋಜನಾ ಮತ್ತು ಆರೋಪಿತರ ಪರ ವಾದ ಆಲಿಸಿದ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿ, ಆರೋಪಿತರು ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಟ್ಟು 6 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 2000 ರೂ ದಂಡ ವಿಧಿಸಿದ್ದಾರೆ.
ದಂಡದ ಮೊತ್ತ ತೆರಲು ತಪ್ಪಿದ್ದಲ್ಲಿ ಮತ್ತೆ 4 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ಅಭಿಯೋಜನಾ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೀತಿ ಎಂ.ಸಿ. ವಾದ ಮಂಡಿಸಿದ್ದರು.
ಇದನ್ನೂ ಓದಿ: ರೌಡಿಶೀಟರ್ ಮನೆಗೆ ನುಗ್ಗಿ ಹಲ್ಲೆ, 6 ಆರೋಪಿಗಳ ಬಂಧನ