ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆ ಈ ಹಿಂದೆ ನಿಗದಿಪಡಿಸಿದ ಹಾಗೆಯೇ ನವೆಂಬರ್ 24 ರಂದು ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಕೂಡ ನವೆಂಬರ್ 24ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವಿವರಿಸಿದ್ದಾರೆ.
ಈ ಎರಡೂ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು, ಕೆಇಎ ವೆಬ್ಸೈಟ್ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಾರಿಯೂ ಅಭ್ಯರ್ಥಿಗಳ ಅನುಕೂಲಕ್ಕಾಗಿ, ಅಭ್ಯಾಸ ಮಾಡಿಕೊಳ್ಳಲಿ ಎನ್ನುವ ಕಾರಣಕ್ಕೆ ಮಾದರಿ ಓಎಂಆರ್ ಶೀಟ್ ಬಿಡುಗಡೆ ಮಾಡಲಾಗಿದೆ. ಅದನ್ನು ಒಮ್ಮೆ ಬಬಲ್ ಮಾಡಿ ಅಭ್ಯಾಸ ಮಾಡಿಕೊಂಡರೆ ಓಎಂಆರ್ ಶೀಟ್ನಲ್ಲಿ ಆಗುವ ತಪ್ಪುಗಳನ್ನು ತಪ್ಪಿಸಬಹುದು. ಈ ಶೀಟ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ತಿಳಿಸಿದ್ದಾರೆ.
ಎರಡು ಪತ್ರಿಕೆಗಳು: ಈ ಎರಡೂ ಪರೀಕ್ಷೆಗಳಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಗಳು ಇರುತ್ತವೆ. ಹಾಗೆಯೇ ಪ್ರತ್ಯೇಕ ಓಎಂಆರ್ ಉತ್ತರ ಪತ್ರಿಕೆಗಳು ಇದ್ದು ಪರೀಕ್ಷೆ ಆರಂಭದಲ್ಲಿ ಒಟ್ಟಿಗೆ ನೀಡಲಾಗುತ್ತದೆ. ಅಭ್ಯರ್ಥಿಗಳು ಪತ್ರಿಕೆ- 1ರ ಉತ್ತರಗಳನ್ನು ಪತ್ರಿಕೆ 1ರ ಓಎಂಆರ್ ಉತ್ತರ ಪತ್ರಿಕೆಯಲ್ಲೇ ದಾಖಲಿಸಬೇಕು. ಹಾಗೆಯೇ ಪತ್ರಿಕೆ- 2 ಅನ್ನೂ ಇದೇ ರೀತಿ ಬರೆಯಬೇಕು. ಈ ವಿಷಯದಲ್ಲಿ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಕೆ-ಸೆಟ್ ಪರೀಕ್ಷೆಗೆ 1.05 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಾಯಚೂರು ವಿಶ್ವವಿದ್ಯಾಲಯ ಸಹಾಯಕ ಉಪನ್ಯಾಸಕರ ನೇಮಕಾತಿ ಪರೀಕ್ಷೆಯನ್ನು 2000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಕೆ-ಸೆಟ್ ಪರೀಕ್ಷೆಯು 12 ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದ ವಿವಿಧ ಹುದ್ದೆಗಳಿಗೆ ಡಿಸೆಂಬರ್ 9, 10, 11 ಮತ್ತು 14ರಂದು ಪರೀಕ್ಷೆ ನಡೆಯಲಿದೆ ಎಂದು ಎಚ್ ಪ್ರಸನ್ನ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 402 ಪಿಎಸ್ಐ ನೇಮಕಾತಿ ಅಂತಿಮ ಫಲಿತಾಂಶ ಪ್ರಕಟಿಸಿದ ಕೆಇಎ