ಬೆಂಗಳೂರು : 108 ಆರೋಗ್ಯ ಕವಚದ ಆಂಬ್ಯುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆಂಬ್ಯುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಕಾಲ ಕಾಲಕ್ಕೆ ಸರಿಯಾಗಿ ಸಂಬಂಧಿಸಿದ ಏಜೆನ್ಸಿಯವರಿಗೆ ಸರ್ಕಾರ ನೀಡುತ್ತಾ ಬಂದಿದೆ ಎಂದರು.
ಚಾಲಕರ ವೇತನ ಬಾಕಿ ಉಳಿಸಿಕೊಳ್ಳದಂತೆ ಇಎಂಆರ್ ಏಜೆನ್ಸಿಯವರಿಗೂ ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳ ವೇತನವನ್ನ ಏಜೆನ್ಸಿಯವರು ಚಾಲಕರಿಗೆ ಪಾವತಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳ ವೇತನ ಪಾವತಿ ಕೂಡ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಲೋಪದೋಷಗಳು ಆಗಿರುವುದು ನಿಜ : ವಿಪಕ್ಷ ನಾಯಕರಾದ ಆರ್. ಅಶೋಕ್ ಅರೆಬರೆ ಮಾಹಿತಿ ಪಡೆದು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಬ್ಬ ವಿಪಕ್ಷ ನಾಯಕರಾಗಿ ವಾಸ್ತವಾಂಶಗಳನ್ನ ಅರಿತು ಮಾತನಾಡಬೇಕು. 108 ಸಮಸ್ಯೆ ಆರಂಭವಾಗಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏಜೆನ್ಸಿ ಹಾಗೂ ಚಾಲಕರ ನಡುವಿನ ಸಮಸ್ಯೆಯನ್ನ ಇಲಾಖೆ ಮಧ್ಯಸ್ಥಿಕೆ ವಹಿಸಿ ಸರಿಪಡಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ ಎಂದರು.
35 ಸಾವಿರಕ್ಕೂ ಹೆಚ್ಚು ವೇತನ ದೊರೆಯುತ್ತಿದೆ: 108 ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಶೇ. 45ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಇದೀಗ 108 ಸಿಬ್ಬಂದಿ ಶೇ. 45 ರಷ್ಟು ವೇತನ ಹೆಚ್ಚಳ ಮಾಡಿರುವುದನ್ನ ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಆಂಬ್ಯುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ಚು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ ಶೇ.45 ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.
ಹಣಕಾಸಿನ ಕೊರತೆಯಿಲ್ಲ : ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 2024-25ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 260.33 ಕೋಟಿ ರೂ.ಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ವಾರ್ಷಿಕ 162.40 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್.ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿ ರೂ.ಗಳಂತೆ ವಾರ್ಷಿಕ 162.40 ಕೋಟಿ ರೂ.ಗಳ ಅನುದಾನವನ್ನು ಕಾಲ ಕಾಲಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ. ಈ ಬಗ್ಗೆ 108 ಸಿಬ್ಬಂದಿಯನ್ನ ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಯುತ ಕನಿಷ್ಠ ವೇತನ ಸರ್ಕಾರ ನೀಡುತ್ತಿದ್ದು, ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಿಬ್ಬಂದಿ ಸಹಕರಿಸಬೇಕು : ಹಿಂದಿನ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನ ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಟೆಂಡರ್ಗಳನ್ನ ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನ ಮುಂದುವರೆಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ನಿಯಮಾನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ ಲೋಪಗಳನ್ನ ಸರಿಪಡಿಸುತ್ತಿರುವಾಗ ಸಿಬ್ಬಂದಿ ಸಹಕರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
ಇದನ್ನೂ ಓದಿ : ಕೋವಿಡ್ ಅಕ್ರಮ: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು - ಸಚಿವ ದಿನೇಶ್ ಗುಂಡೂರಾವ್