ವಿಜಯಪುರ: ''ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಏರಿದೆ. ನಾಳೆ ಅಥವಾ ನಾಡಿದ್ದು ಚುನಾವಣಾ ಆಯೋಗದಿಂದ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆಯಿದೆ'' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಹೊರವಲಯದ ಹಿಟ್ನಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಮಾತನಾಡಿದ ಅವರು, ''ನಮ್ಮದು ದೊಡ್ಡ ಪ್ರಜಾತಂತ್ರದ ಚುನಾವಣೆ. ಎಲ್ಲ ವರ್ಗದವರಿಗೂ ಮತದಾನದ ಹಕ್ಕು ನೀಡಲಾಗಿದೆ. ನರೇಂದ್ರ ಮೋದಿಯವರು ಮೂರನೇ ಬಾರಿ ಪಿಎಂ ಆಗುತ್ತಾರೆ. 400 ಹೆಚ್ಚು ಕ್ಷೇತ್ರಗಳಲ್ಲಿ ವಿಜಯ ಸಾಧಿಸುವು ನಮ್ಮ ಗುರಿ ಮತ್ತು ಘೋಷಣೆ ಆಗಿದೆ'' ಎಂದರು.
''ಮೋದಿಯವರು ಹತ್ತು ವರ್ಷಗಳಲ್ಲಿ ದೇಶದ ಗೌರವ, ಭದ್ರತೆಗಾಗಿ ಕೆಲಸ ಮಾಡಿದ್ದಾರೆ. ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಧಾನಿ ಹೋದರೆ ಎದ್ದುನಿಂತು ಗೌರವ ಕೊಡುತ್ತಿರಲಿಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಇದು ಬದಲಾಗಿದೆ. ದೇಶದ ಸೈನ್ಯದ ದಿಕ್ಕು ಬದಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿದೆ. ಜಿ20 ಸಮ್ಮೇಳನ ಯಶಸ್ವಿಯಾಗಿ ಮಾಡಿದ ಕೀರ್ತಿಯನ್ನು ಮೋದಿ ಹೆಚ್ಚಿಸಿದ್ದಾರೆ. ಮೋದಿ ಯಾವುದೇ ದೇಶಕ್ಕೆ ಹೋದರು ಗೌರವ ಸಿಗುತ್ತಿದೆ. ಅಭಿವೃದ್ಧಿಯಲ್ಲಿ ದೇಶ ದಾಪುಗಾಲು ಇಟ್ಟಿದೆ. ಬಡತನ ರೇಖೆಗಿಂತ ಕೆಳಗಿನವರನ್ನು ಮೇಲೆಕ್ಕೆತ್ತಲಾಗಿದೆ. ರೈತರಿಗೆ ಸಹಾಯ ಮಾಡಿದ್ದಾರೆ. 11ನೇ ಆರ್ಥಿಕ ಸ್ಥಾನದಲ್ಲಿದ್ದ ಭಾರತ 5ನೇ ಸ್ಥಾನಕ್ಕೆ ಏರಿದೆ. 2047ಕ್ಕೆ ಭಾರತ ವಿಶ್ವಗುರು ಆಗಲಿದೆ ಎಂದಿದ್ದಾರೆ'' ಎಂದು ತಿಳಿಸಿದರು.
''ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚಳ ಮಾಡಿದ್ದೇವೆ. ರೈಲ್ವೆಗೆ ಹೊಸ ಕಾಯಕಲ್ಪ ನೀಡಲಾಗಿದೆ. ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಸಾಧನೆ ಮಾಡಿದೆ. ಮೋದಿಗೆ ಮತ್ತೆ ಅವಕಾಶ ನೀಡಿ'' ಎಂದು ಮನವಿ ಮಾಡಿಕೊಂಡರು.
''ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು, ಜನರು ಮೋದಿಗೆ ಬೆಂಬಲ ನೀಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 370 ಕಲಂ ರದ್ದು ಮಾಡಲಾಗಿದೆ. ರಾಮ ಮಂದಿರ ನಿರ್ಮಿಸಿದ್ದೇವೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಮೋದಿ ಕೈ ಬಲ ಪಡಿಸುತ್ತೇವೆ. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಕೆಲಸ ಮಾಡುತ್ತೇವೆ'' ಎಂದರು.
ಗೋಬ್ಯಾಕ್ ಶೋಭಾ ವಿಚಾರ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಾ ವಿಚಾರವಾಗಿ ಮಾತನಾಡಿ, ''ಕ್ಷೇತ್ರದಲ್ಲಿ ಸಹಜವಾಗಿ ಗೊಂದಲವಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲುವ ಕ್ಷೇತ್ರ ಹಾಗಾಗಿ ಬೇಡಿಕೆಯಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿನ ಜನರು ನನಗೆ ಎರಡು ಬಾರಿ ಗೆಲ್ಲಿಸಿದ್ದಾರೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹೊರಗಿನವರು ಬಂದಿರುವ ಟಿಕೆಟ್ ಆಕಾಂಕ್ಷಿಗಳು ಈ ರೀತಿ ಮಾಡುತ್ತಿದ್ದಾರೆ. ನಾನೂ ವಿಚಲಿತಳಾಗಿಲ್ಲ. ಕಾರ್ಯಕರ್ತರು ಸಹ ವಿಚಲಿತರಾಗಿಲ್ಲ. ಬೇರೆಯವರು ಟಿಕೆಟ್ ಕೇಳೋದು ತಪ್ಪಲ್ಲ. ಆದರೆ, ಅವಮಾನ ಮಾಡೋದು ಸರಿಯಲ್ಲ'' ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ''ನನಗೆ ಗೊತ್ತಿಲ್ಲ ನಾನು ಪೈಟರ್, ಎಲ್ಲೇ ಟಿಕೆಟ್ ಕೊಟ್ಟರೂ ಹೋರಾಡುವೆ, ಗೆಲ್ಲುವೆ'' ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಪಕ್ಷ ವಿರೋಧಿ ಚಟುಟವಟಿಕೆ ಮಾಡಿರೋ ಆರೋಪ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ''ನಾನು ಯಾವುದೇ ದ್ರೋಹ ಮಾಡಿಲ್ಲ. ಹೆತ್ತ ತಾಯಿಗೆ ದ್ರೋಹ ಮಾಡಿಲ್ಲ, ಒಮ್ಮೆ ಪಕ್ಷದ ಟಿಕೆಟ್ ಕೊಟ್ಟರೆ ಮುಗೀತು ಅವರ ಪರವಾಗಿ ಕೆಲಸ ಮಾಡುತ್ತೇನೆ'' ಎಂದರು.
ರಾಜ್ಯ ಸರ್ಕಾರದ ವಿರುದ್ಧ ಶೋಭಾ ವಾಗ್ದಾಳಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ''ರಾಜ್ಯ ಸರ್ಕಾರ ರೈತರನ್ನು ಮರೆತಿದೆ. ಕೇಂದ್ರ ಸರ್ಕಾರ ಕೊಟ್ಟಿರುವ 235 ಕೋಟಿ ಹಣವನ್ನೂ ರಾಜ್ಯ ಸರ್ಕಾರ ರೈತರಿಗೆ ನೀಡಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರದ ಹಣ ಕೊಡಲು ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ. ಒಂದು ಲಕ್ಷ ಕೋಟಿ ಹಣ ಮೀಸಲಿಡಲಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಯಾವುದೇ ಪ್ರಸ್ತಾವನೆ ನೀಡಿಲ್ಲ. 33 ಸಾವಿರ ಕೋಟಿ ರೂ. ಫುಡ್ ಪ್ರೊಸೆಸ್ಸಿಂಗ್ಗೆ ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಈ ಕುರಿತು ಕೆಲಸ ಮಾಡಲು ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲ. ಗ್ಯಾರಂಟಿ ಯೋಜನೆಗಳ ಬೆನ್ನು ಬಿದ್ದಿದ್ದಾರೆ. ಸಿಎಂ, ಡಿಸಿಎಂ ಹಾಗೂ ಇತರ ಸಚಿವರಿಗೆ ಆಸಕ್ತಿಯಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
''ರಾಜ್ಯದಲ್ಲಿ ಕುಡಿಯೋ ನೀರಿಲ್ಲ. ಆದ್ರೂ ಕಾವೇರಿಯಿಂದ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಬೆಂಗಳೂರಿನಲ್ಲಿ ಜನರಿಗೆ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ'' ಎಂದು ಗರಂ ಆದರು.
ಇದನ್ನೂ ಓದಿ: ಸೆ.17ರಂದು ಹೈದರಾಬಾದ್ ವಿಮೋಚನಾ ದಿನಾಚರಣೆ: ಕೇಂದ್ರ ಸರ್ಕಾರ ಘೋಷಣೆ