ಮೈಸೂರು: ಸ್ವಂತ ಖರ್ಚಿನಲ್ಲಿ ಯೂಟ್ಯೂಬ್ ಚಾನಲ್ ತೆರೆದು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ತಾಂತ್ರಿಕ ಶಿಕ್ಷಣ ಬೋಧಿಸುತ್ತಿದ್ದ ತರಬೇತಿ ಅಧಿಕಾರಿಯೊಬ್ಬರಿಗೆ ರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ಹೌದು, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ವತಿಯಿಂದ ಕೊಡಮಾಡುವ 2024ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ನಗರದ ಎನ್.ಆರ್. ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಕೆ.ಜೆ. ಶಿವಲಿಂಗಯ್ಯ ಅವರು ಭಾಜನರಾಗಿದ್ದಾರೆ.
ಕ್ಯಾಮರಾ ಬಾಡಿಗೆ ಪಡೆದು ವಿಡಿಯೋ ಚಿತ್ರೀಕರಣ: ಈ ಕುರಿತು ತರಬೇತಿ ಅಧಿಕಾರಿ ಕೆ.ಜೆ. ಶಿವಲಿಂಗಯ್ಯ 'ಈಟಿವಿ ಭಾರತ' ಜೊತೆಗೆ ಮಾತನಾಡಿ, ನಮ್ಮ ಕಾಲೇಜಿಗೆ ಹಳ್ಳಿ ಗಾಡಿನ ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಿದ್ದರು. ಅವರು ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದರು. ಕೆಲವು ವಿದ್ಯಾರ್ಥಿಗಳು ಪೇಂಟಿಂಗ್, ಕ್ಯಾಟರಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಇವರೆಲ್ಲರಿಗೂ ತರಗತಿಗಳಿಗೆ ಬರಲು ಕೆಲವೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಕೈಗಾರಿಕಾ ತರಬೇತಿ ತರಗತಿಗಳಲ್ಲಿ ಕೌಶಲ್ಯ ಹೆಚ್ಚಿಸುವ ಕುರಿತು ತರಗತಿಗಳನ್ನು ಮಾಡಲಾಗುತ್ತದೆ. ಹೀಗಾಗಿ ನಾನು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಒಂದು ಕ್ಯಾಮರಾ ಬಾಡಿಗೆ ಪಡೆದು ವಿಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಲು ಶುರು ಮಾಡಿದೆ ಎಂದು ತಿಳಿಸಿದರು.
ಮೆಕ್ಯಾನಿಕಲ್ ವಿಷಯಕ್ಕೆ ಸಂಬಂಧಿಸಿದ ಪಠ್ಯ ಮತ್ತು ಪ್ರಾಯೋಗಿಕ ವಿಷಯಗಳ ಕುರಿತು ಕಾಲೇಜಿನ ಲ್ಯಾಬ್ಗಳಲ್ಲಿಯೇ ವಿಡಿಯೋಗಳನ್ನು ವಿದ್ಯಾರ್ಥಿಗಳ ಸಹಾಯದೊಂದಿಗೆ ಚಿತ್ರೀಕರಿಸಿ "ಡಿಜಿಟಲ್ ಐಟಿಐ" ಯೂಟ್ಯೂಬ್ ಚಾನಲ್ಗೆ ಅಪ್ಲೋಡ್ ಮಾಡುತ್ತಿದ್ದೆ. ಈಗಿನ ಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳ ಬಳಿ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಅದರ ಜೊತೆಯಲ್ಲಿಯೇ ಯೂಟ್ಯೂಬ್ ಕೂಡ ಇರುತ್ತದೆ. ಇದನ್ನು ಮನಗಂಡು ಯೂಟ್ಯೂಬ್ ಮೂಲಕ ಬೋಧಿಸುವುದು ಸೂಕ್ತ ಎಂದು ತರಗತಿಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡಿದೆ ಎಂದು ಶಿವಲಿಂಗಯ್ಯ ಮಾಹಿತಿ ನೀಡಿದರು.
ವಿದೇಶಗರಿಂದಲೂ ವಿಡಿಯೋ ವೀಕ್ಷಣೆ: ಅನೇಕ ವಿದ್ಯಾರ್ಥಿಗಳು ಅದನ್ನು ನೋಡಿ ಮೆಚ್ಚಿಕೊಂಡರು. ಹಾಗೆಯೇ ಈ ವಿಡಿಯೋಗಳು ವಿದ್ಯಾರ್ಥಿಗಳು ಸೇರಿದಂತೆ ಅನೇಕರ ಕಲಿಕೆಗೆ ಸಹಾಯವಾಗುತ್ತಿವೆ. ಇದಕ್ಕಾಗಿ ಕಾಲೇಜಿನ ಎಲ್ಲ ಶಿಕ್ಷಕ ವೃಂದದವರು ನನ್ನ ಪ್ರಯತ್ನಕ್ಕೆ ಸಾಥ್ ನೀಡಿದರು. ಅದರಲ್ಲೂ ಸಿಎನ್ಎ ತಂತ್ರಜ್ಞಾನ ಕುರಿತು ವಿಶೇಷ ತರಗತಿಗಳನ್ನು ವಿಡಿಯೋ ಮಾಡಿ ಹಾಕುತ್ತಿದ್ದೆ. ಸಿಎನ್ಎ ವಿಷಯ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಆಗಿತ್ತು. ನನ್ನ ಯೂಟ್ಯೂಬ್ ತರಗತಿಗಳನ್ನು ನಮ್ಮ ದೇಶದವರಷ್ಟೇ ಅಲ್ಲದೇ ಹೂರ ದೇಶದ ಕೈಗಾರಿಕಾ ಸಿಬ್ಬಂದಿಗಳೂ ನೋಡಿ ನಮ್ಮನ್ನು ಸಂಪರ್ಕ ಮಾಡಿ ಸಂದೇಶಗಳನ್ನು ಕಳುಹಿಸಿತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜಿಗೆ ಹೆಚ್ಚು ಅನುದಾನ ನೀಡಿದ ಸರ್ಕಾರ: ಈ ಪ್ರಶಸ್ತಿ ನನಗೆ ಮಾತ್ರ ಅಲ್ಲ, ಇದು ನಮ್ಮ ಇಡೀ ಕೈಗಾರಿಕಾ ತರಬೇತಿ ಕಾಲೇಜಿಗೆ ಸೇರಿದ್ದು. ಕೈಗಾರಿಕಾ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ಹೆಚ್ಚು ಕಲಿಸಿಕೊಡುತ್ತೇವೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲೂ ಕೂಡಾ ಉದ್ಯೋಗ ಪಡೆಯಬಹುದು. ನನ್ನ ಈ ಐಟಿಐ ಡಿಜಿಟಲ್ ಚಾನಲ್ಗೆ 7,500 ಮಂದಿ ಚಂದಾದಾರರಿದ್ದಾರೆ. ಹಾಕಿದ ವಿಡಿಯೋವನ್ನು 57,000 ಜನರು ನೋಡಿದ್ದಾರೆ. ಈ ಹಿನ್ನೆಲೆ ನಮ್ಮ ಕಾಲೇಜಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಇದರಿಂದ ನಾವು ದೊಡ್ಡ ದೊಡ್ಡ ಯಂತ್ರಗಳನ್ನು ಕೂಡಾ ಖರೀದಿ ಮಾಡಿದ್ದೇವೆ ಎಂದು ಕೆ.ಜೆ. ಶಿವಲಿಂಗಯ್ಯ ವಿವರಿಸಿದರು.
ಇದನ್ನೂ ಓದಿ: ಇನ್ಮುಂದೆ ಮೊಬೈಲ್ ಆ್ಯಪ್‌ನಲ್ಲೇ ಬಿಎಂಟಿಸಿ ಬಸ್ ಪಾಸ್ ಲಭ್ಯ!: ನೀವು ಪಡೆಯುವುದು ಹೇಗೆ? - BMTC Digital Pass